ಬೆಳಗಾವಿಯಲ್ಲಿ ನೂತನ ಕುಸ್ತಿ ಅಖಾಡ ನಿರ್ಮಾಣ: ಸರ್ಕಾರದ ಘೋಷಣೆ ಸ್ವಾಗತಿಸಿದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ

ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಕುಸ್ತಿ ಕ್ರೀಡೆಗೆ ಸರ್ಕಾರದ ಬೆಂಬಲ
  • ಕ್ರೀಡಾಪಟುಗಳಲ್ಲಿ ಹೊಸ ಭರವಸೆ

ಬೆಂಗಳೂರು: ರಾಜ್ಯದ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಹಾಗೂ ಮೂಲಸೌಕರ್ಯ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಬೆಳಗಾವಿಯ ಬೆಳಗುಂದಿಯಲ್ಲಿ 'ನೂತನ ಕುಸ್ತಿ ಅಖಾಡ'ವನ್ನು ನಿರ್ಮಿಸುವ ಸರ್ಕಾರದ ಘೋಷಣೆಯನ್ನು *ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರು ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಗಳಾಗಿರುವ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಸ್ವಾಗತಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವದ ನಿರ್ಧಾರದ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಇದು ಬೆಳಗಾವಿ ಭಾಗದ ಹಾಗೂ ಉತ್ತರ ಕರ್ನಾಟಕದ ನೂರಾರು ಯುವ ಗ್ರಾಮೀಣ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ವೇದಿಕೆ ಕಲ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಬೆಳಗಾವಿಯು ಮೊದಲಿನಿಂದಲೂ ಕುಸ್ತಿ ಕ್ರೀಡೆಗೆ ಮತ್ತು ಗರಡಿ ಮನೆಗಳಿಗೆ ಹೆಸರುವಾಸಿಯಾದ ನೆಲ. ಸಾವಿರಾರು ಯುವಕರು ಕುಸ್ತಿಯನ್ನೇ ಉಸಿರಾಗಿಸಿಕೊಂಡು ಬೆಳೆದಿದ್ದಾರೆ. ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಬೆಳಗುಂದಿಯಲ್ಲಿ ಸುಸಜ್ಜಿತ ನೂತನ ಕುಸ್ತಿ ಅಖಾಡ ನಿರ್ಮಿಸುವ ಸರ್ಕಾರದ ಹೆಜ್ಜೆ ಇಡೀ ಕ್ರೀಡಾ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ," *ಎಂದು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಕೃತಜ್ಞತೆ:

"ಕುಸ್ತಿ ನಮ್ಮ ರಾಜ್ಯದ ಕ್ರೀಡೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕುಸ್ತಿಪಟುಗಳ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ, ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹದೊಂದು ಅತ್ಯುತ್ತಮ ಕೊಡುಗೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಇಡೀ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಹಾಗೂ ಸಮಸ್ತ ಕುಸ್ತಿಪಟುಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.

"ಬೆಳಗುಂದಿಯಲ್ಲಿ ನಿರ್ಮಾಣವಾಗಲಿರುವ ನೂತನ ಅಖಾಡವು ಕೇವಲ ತಾಲೀಮು ಕೇಂದ್ರವಾಗದೆ, ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ನೂರಾರು ಚಾಂಪಿಯನ್ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿ," ಎಂದು *ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ* ಅವರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲೂ ಸುಸಜ್ಜಿತ ಕುಸ್ತಿ ಅಖಾಡ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net