ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನ.26ರಂದು ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀಮಾರ್ನಿಸಲಾಗಿದೆ ಎಂದು ಪ್ರಗತಿಪರ ಸಂಘಟನೆಯ ಮುಖಂಡ ಗುರುರಾಜಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1949ರ ನವೆಂಬರ್ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಲಾಯಿತು. ಆದರೆ, ಆ ದಿನವನ್ನು ಕಡೆಗಣನೆ ಮಾಡಿಕೊಂಡು ಬರಲಾಗುತ್ತಿದೆ. ಜನರಿಗೆ ಸಂವಿಧಾನ ಅರ್ಥೈಸುವ ನಿಟ್ಟಿನಲ್ಲಿ ಸರ್ಕಾರಗಳು ಸೋತಿವೆ.ತಾಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀಮಾರ್ನಿಸಲಾಗಿದೆ ಎಂದರು.
ಒಂದು ಸಾವಿರ ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು, ಭಾರತ ಸೇವಾದಳ ತಂಡಗಳು ಕೂಡ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದ ಜತೆಗೆ ವಿಶೇಷ ಉಪನ್ಯಾಸ ಕೂಡ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರಾಂತ ರೈತ ಸಂಘದ ಮುಖಂಡ ಚಂದ್ರ ತೇಜಸ್ವಿ ಮಾತನಾಡಿ, ಅನೇಕರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಸಂವಿಧಾನ ನಾಶವಾದರೆ ದೇಶವೇ ನಾಶವಾದಂತೆ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ದುರ್ಬಲಗೊಳಿಸಲಾತ್ತಿದೆ. ಸಂವಿಧಾನ ಉಳಿದರೆ ಒಕ್ಕೂಟ ವ್ಯವಸ್ಥೆ ಉಳಿಯುತ್ತದೆ. ಸಂವಿಧಾನ ದಿನ ಎಂದರೆ ಸಂವಿಧಾನ ರಕ್ಷಣೆ ಮಾಡುವ ದಿನ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಲಕ್ಷ್ಮೀಪತಿ ಮಾತನಾಡಿ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆ, ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಹಾಕಿಸಲು ಸರ್ಕಾರ ಸೂಚನೆ ನೀಡಿದೆ. ಭಾರತ ಸೇವಾದಳದ ವತಿಯಿಂದ ಕೂಡ ಅನೇಕರು ಭಾಗಿಯಾಗಲಿದ್ದಾರೆ ಎಂದರು.
ಸಂವಿಧಾನದಿಂದ ಅನೇಕ ಸೌಲಭ್ಯ ಪಡೆಯುತ್ತಿದ್ದೇವೆ. ಜನರಿಗೆ ಸಂವಿಧಾನದಬಗ್ಗೆ ತಿಳಿಸುವ ಕೆಲಸ ಆಗಬೇಕು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕು. ಮೌಢ್ಯಗಳನ್ನು ಬಿತ್ತನೆ ಮಾಡಬಾರದು. ಸಂವಿಧಾನ ಓದುವ ಕೆಲಸವಾಗಬೇಕು.