ನಗರಸಭೆಯ 22 ಕಾಂಗ್ರೆಸ್​ ಸದಸ್ಯರು ರಾಜೀನಾಮೆ

ಎಚ್​.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್​ ಸದಸ್ಯರು ಪ್ರತಿಭಟಣೆ ನಡೆಸಿದರು.
ಎಚ್​.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್​ ಸದಸ್ಯರು ಪ್ರತಿಭಟಣೆ ನಡೆಸಿದರು.
Published on

ಹಳೇ ಡಿಸಿ ಆಫೀಸ್​ ಕಚೇರಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಗದಗ
ಮಾಜಿ ಸಚಿವ, ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್​.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ಕಾಂಗ್ರೆಸ್​ ಸದಸ್ಯರು ನಗರಸಭೆಯ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಅವರಿಗೆ ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು.
ಗದಗ- ಬೆಟಗೇರಿ ನಗರಸಭೆ 17 ಕಾಂಗ್ರೆಸ್​ ಸದಸ್ಯರು, 5 ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 22 ಜನ ಸದಸ್ಯರು ಜಿಲ್ಲಾಧಿಕಾರಿ ಅವರಿಗೆ ರಾಜೀನಾಮೆ ಸಲ್ಲಿಸಿ, ರಾಜ್ಯ ಕಾಂಗ್ರೆಸ್​ ಹಾಗೂ ಹೈಕಮಾಂಡ ವಿರುದ್ಧ ಆಕ್ರೋಶ ಹೊರಹಾಕಿದರು. ಜತೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರು.
ನಾಲ್ಕು ಬಾರಿ ವಿಧಾನ ಪರಿಷತ್​ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ, ಹಿರಿಯ ರಾಜಕಾರಣಿಯಾಗಿ ರಾಜ್ಯದ ಅಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸದೇ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ್ದರ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ನಗರಸಭೆ ಸದಸ್ಯರು ತಿಳಿಸಿದರು.
ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಶಾಸಕ ಎಚ್​.ಕೆ. ಪಾಟೀಲ ಅವರ ಕೊಡುಗೆ ಅಪಾರವಿದೆ. ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಕಳಸಾ ಬಂಡೂರಿ ನಾಲೆಯಲ್ಲಿ ರಾಜ್ಯದ ನೀರಿನ ಪಾಲನ್ನು ಗೊತ್ತು ಮಾಡಿಕೊಟ್ಟರು. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ವಿಶ್ವದ ಏಕೈಕ ಗ್ರಾಮೀಣಣಾಭಿವೃದ್ಧಿ ವಿಶ್ವ ವಿದ್ಯಾಲಯವನ್ನು ಗದಗ ನಗರಕ್ಕೆ ತಂದರು. ಪ್ರವಾಸೋದ್ಯಮ ಸಚಿವರಾಗಿ ಗದಗ ಜಿಲ್ಲೆಯ ಹಲವುಯ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ನೂರಾರು ಕೋಟಿ ಅನುದಾನ ತಂದು ಲಕ್ಕುಂಡಿ ಸೇರಿದಂತೆ ವಿವಿಧ ದೇವಸ್ಥಾನಗಳ ಪುನರುಜ್ಜೀವನಗೊಳಿಸಿದ್ದಾರೆ. ಕಾನೂನು ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರದಲ್ಲಿ ಅನುಭವಿ ಆಗಿದ್ದರೂ ಸಹ ಎಚ್​.ಕೆ. ಪಾಟೀಲರಿಗೆ ಸಚಿವ ಸ್ಥಾನ ಸಿಗದಿರುವುವು ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ ಎಚ್​.ಕೆ. ಪಾಟೀಲರು ಕಳೆದ ಹಲವು ದಶಕಗಳಿಂದ ಪಕ್ಷದ ಸಂಟನೆ ಮತ್ತು ಆಡಳಿತದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಗದಗ ಜಿಲ್ಲೆಗೆ ಮಾತ್ರವಲ್ಲದೇ ಈಡೀ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬರ ನೀಗಿಸಿ ಕೃಷಿಗೆ ನೀರು ಪೂರೈಸಲು ಮೋಡಬಿತ್ತನೆ ಎಂಬ ಪರಿಕಲ್ಪನೆಯನ್ನು ರಾಜ್ಯದಲ್ಲಿ ಎಚ್​.ಕೆ. ಪಾಟೀಲರು ಆರಂಭಿಸಿದರು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಗದಗ ಜಿಲ್ಲೆಗೆ ಅಷ್ಟೇ ಅಲ್ಲದೇ ಉತ್ತರ ಕರ್ನಾಟಕಕ್ಕೆ ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್​ ಹೈಕಮಾಂಡ ಅನ್ಯಾಯ ಮಾಡಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಿ ಎಚ್​.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಸುರೇಶ ಕಟ್ಟಿಮನಿ, ಆಂಜನೇಯ ಕಟಗಿ, ಬರಕತಲಿ ಮುಲ್ಲಾ, ರವಿ ಕಮತರ, ಚಂದ್ರು ಕರಿಸೋಮನಗೌಡ್ರ, ಇಮ್ತಿಯಾಜ ಶಿರಹಟ್ಟಿ, ಪದ್ಮಾ ಕಟಗಿ, ಪರವೀನಬಾನು ಮುಲ್ಲಾ, ಶಕುಂತಲಾ ಅಕ್ಕಿ, ಜೈನುದ್ದೀನ ನಮಾಜಿ ಸೇರಿದಂತೆ ಅನೇಕರು ಇದ್ದರು.
ಪ್ರತಿಭಟನೆ, ರಸ್ತೆ ತಡೆ, ಪ್ರತ್ಯೇಕ ರಾಜ್ಯದ ಬೇಡಿಕೆ:
ಎಚ್​.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ನಗರಸಭೆ ಸದಸ್ಯರು, ಕಾಂಗ್ರೆಸ್​ ಕಾರ್ಯಕರ್ತರು ನಗರದ ಹಲೇ ಡಿಸಿ ಆಫಿಸ್​ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿಮಿರ್ಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್​ ಹೈಕಮಾಂಡ್​ಗೆ, ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ದಿಕ್ಕಾರ ಕೂಗಿದರು. ಇದೇ ವೇಳೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಬೇಡಿಕೆ ಇಟ್ಟರು. ಪ್ರತಿಭನೆ ಹಿನ್ನೆ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರ ಮನವೊಲಿಕೆ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net