ಕಾಂಗ್ರೆಸ್​​ನವರಿಗೆ ಸಡನ್ ಆಗಿ ದೇವೇಗೌಡರ ಮೇಲೆ ಮರುಕ ಹುಟ್ಟಿದೆ: ಎಂಎಲ್​ಸಿ ಸಿ.ಟಿ.ರವಿ ವಾಗ್ದಾಳಿ, ಗೃಹ ಸಚಿವ ಖರ್ಗೆಗೂ ಟಾಂಗ್​ | C T Ravi

ಸಿ.ಟಿ.ರವಿ, ಹೆಚ್​.ಡಿ.ದೇವೇಗೌಡರು, ಪ್ರಿಯಾಂಕ್ ಖರ್ಗೆ
ಸಿ.ಟಿ.ರವಿ, ಹೆಚ್​.ಡಿ.ದೇವೇಗೌಡರು, ಪ್ರಿಯಾಂಕ್ ಖರ್ಗೆ
Published on
ಬೆಂಗಳೂರು: ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಎನ್​ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡದೇ ಬಿಜೆಪಿ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಪರಿಷತ್ ಸದಸ್ಯ ಸಿ.ಟಿ.ರವಿ(C T Ravi), ಕಾಂಗ್ರೆಸ್​ನವರಿಗೆ ಈಗ ಯಾಕೆ ಸಡನ್ ಆಗಿ ದೇವೇಗೌಡರ ಮೇಲೆ ಮರುಕ ಹುಟ್ಟಿದೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ನವರ ಮಾತಿನಲ್ಲಿ ಕೃತಿಮತೆ ಇದೆ, ಅವರ ನಾಟಕೀಯ ಮಾತುಗಳಿಗೆ ಉತ್ತರಿಸುವ ಅಗತ್ಯವಿಲ್ಲ. ದೇವೇಗೌಡರ ಮೇಲೆ ಸಹಜ ಪ್ರೀತಿ, ವಾತ್ಸಲ್ಯ ಇದೆ. ಅದು ವ್ಯವಹಾರದ ಸಂಬಂಧವಾಗಿ ಬಂದಿದ್ದಲ್ಲ. ಹೇಗೆ ಗೌರವಿಸಬೇಕು ಅಂತಾ ಬಿಜೆಪಿ ಕಾಂಗ್ರೆಸ್​​ನಿಂದ ಕಲಿಯಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರ್, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ? ನೀವು ನಮಗೆ ಪಾಠ ಹೇಳುತ್ತೀರಾ?, ದೇವೇಗೌಡರು ಮತ್ತು ಮೋದಿ ಸಂಬಂಧ ಅಣ್ಣ-ತಮ್ಮ, ತಂದೆ ಮಗನಿಗೆ ತೋರಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆರ್​ಎಸ್​ಎಸ್​ ನೋಂದಣಿ ದಾಖಲೆ ರೆಡಿ ಮಾಡಿಟ್ಟುಕೊಳ್ಳಲಿ ಎಂಬ ಗೃಹಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು ನೀಡಿದ ಅವರು, ನೆಹರು ಪ್ರಧಾನಿಯಾಗಿದ್ದಾಗ ಐ ವಿಲ್ ಕ್ರಶ್ ಆರ್​ಎಸ್​ಎಸ್​ ಅಂತ ಹೇಳಿದ್ದರು. ಇಂದು ಆರ್​ಎಸ್ಎಸ್ ಇದೆ, ಆದರೆ ನೆಹರು ಇಲ್ಲ. ಇಂದಿರಾ ಗಾಂಧಿ ನಿಷೇಧಿಸುತ್ರೇನೆ ಎಂದಿದ್ರು, ಅವರು ಇಲ್ಲ. ಪ್ರಿಯಾಂಕ್ ಖರ್ಗೆಯವರೇ ನೀವು ನಿನ್ನೆ ಮೊನ್ನೆ ಗೃಹ ಸಚಿವ ಆಗಿದ್ದೀರಿ. ನಿಮ್ಮಪ್ಪ ಗೃಹ ಸಚಿವರಾಗಿದ್ರು. ನಿಮ್ಮಪ್ಪನ‌ ಕೈಯಲ್ಲೇ ಏನೂ ಮಾಡಲು ಆಗಿಲ್ಲ, ಇನ್ನು ನೀವೇನು ಮಾಡುತ್ತೀರಿ? ಎಂದು ಟಾಂಗ್ ನೀಡಿದ್ದಾರೆ.
ಮುಂದೆ ಅಪ್ಪನಾಣೆಗೂ ಕಾಂಗ್ರೆಸ್ ಬರಲ್ಲ. ನಿಮ್ಮ ನಂತರವೂ ಆರ್​ಎಸ್​ಎಸ್​ ಇರುತ್ತದೆ. ನೀವು ಗೃಹ ಸಚಿವರು, ಕಾನೂನು ಸುವ್ಯವಸ್ಥೆ, ಬಾಂಬ್ ತಯಾರಿಸುವ ದ್ರೋಹಿಗಳ ಬಗ್ಗೆ ಗಮನ ಹರಿಸಿ. ಗೂಂಡಾಗಳ ತರಹ ವರ್ತಿಸಬಾರದು. ಅಧಿಕಾರದಲ್ಲಿದ್ದಾಗ ಮೆರೆದವರನ್ನು ಈಗ ಹೇಗೆ ಹೊಡೆಯುತ್ತಿದ್ದಾರೆ ಅಂತ ಪಶ್ಚಿಮ ಬಂಗಾಳದಲ್ಲಿ ನೋಡಿಲ್ವಾ? ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ನೀವು ಈಗ ಬೆಂಕಿ ಹಚ್ಚುವ ಜಾಗದಲ್ಲಿ ಇಲ್ಲ, ಬೆಂಕಿ ಆರಿಸುವ ಜಾಗದಲ್ಲಿದ್ದೀರಿ. ನೀವು ಸರ್ವಾಧಿಕಾರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net