ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತ! ಗ್ಯಾರಂಟಿ ಯೋಜನೆಗಳೇ ಗೆಲುವಿನ ಕಾರಣ ಎಂದ CM ಡಿಕೆಶಿ

CM DK Shivakumar
CM DK Shivakumar
Published on
ಬೆಂಗಳೂರು: ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದು ಹೊಸ ರಾಜಕೀಯ ಸಂದೇಶ ರವಾನಿಸಿದೆ. ಫಲಿತಾಂಶದ ಬಳಿಕ ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ CM ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಐವರು ಅಭ್ಯರ್ಥಿಗಳನ್ನು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಬಿ.ಕೆ. ಹರಿಪ್ರಸಾದ್, ಬಿ.ವಿ. ಶಿವಣ್ಣ, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್ ಮತ್ತು ವಿನಯ್ ಕಾರ್ತಿಕ್ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.
ಫಲಿತಾಂಶದ ಕುರಿತು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, "ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯದ ಜನಪರ ಆಡಳಿತಕ್ಕೆ ಸಿಕ್ಕಿರುವ ದೊಡ್ಡ ಗೆಲುವು. ಕಾಂಗ್ರೆಸ್ ಬಳಿ 135 ಶಾಸಕರ ಬಲವಿತ್ತು. ಪಕ್ಷೇತರರು ಹಾಗೂ ಬಿಜೆಪಿಯಿಂದ ಉಚ್ಛಾಟನೆಯಾದ ಇಬ್ಬರು ಶಾಸಕರ ಬೆಂಬಲ ಸೇರಿ ಹೆಚ್ಚುವರಿ ಮತಗಳು ಲಭಿಸಿವೆ. ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ 151 ಮತಗಳು ಸಿಕ್ಕಿವೆ. ನಿರೀಕ್ಷೆಗಿಂತ 11 ಮತಗಳು ಹೆಚ್ಚಾಗಿ ಬಂದಿವೆ" ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಶಾಸಕರು ಸಹ ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿರುವ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚುವರಿ ಬೆಂಬಲ ದೊರೆತಿದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಗ್ಯಾರಂಟಿ ಕಾರ್ಯಕ್ರಮಗಳಿಗೆ ಶಾಸಕರು ಬೆಂಬಲ ಸೂಚಿಸಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಸುರ್ಜೇವಾಲಾ ಅಭಿಪ್ರಾಯಪಟ್ಟರು.
"ಕೇಂದ್ರ ಸರ್ಕಾರದ ತಾರತಮ್ಯ ನೀತಿ ಹಾಗೂ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ನಿಲುವುಗಳಿಗೆ ಈ ಫಲಿತಾಂಶ ಉತ್ತರವಾಗಿದೆ. ಜನರ ಪರ ಕೆಲಸ ಮಾಡಿದ ಸರ್ಕಾರಕ್ಕೆ ಶಾಸಕರು ಮುದ್ರೆ ಒತ್ತಿದ್ದಾರೆ" ಎಂದು ಅವರು ಹೇಳಿದರು.

ಶಾಸಕ ಬೆಂಬಲ ಆಶ್ಚರ್ಯ ಮೂಡಿಸಿದೆ: ಡಿಕೆಶಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಮೇಲ್ಮನೆ ಚುನಾವಣೆ ಇದು. ಫಲಿತಾಂಶ ನೋಡಿದಾಗ ಶಾಸಕರಿಂದ ದೊರೆತಿರುವ ಬೆಂಬಲ ಆಶ್ಚರ್ಯ ಮೂಡಿಸಿದೆ. ಇದು ನಮ್ಮ ಸರ್ಕಾರಕ್ಕೆ ಸಿಕ್ಕಿರುವ ಬೆಂಬಲ ಮಾತ್ರವಲ್ಲ, ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಇದೇ ರೀತಿಯಲ್ಲಿ ಮುಂದುವರಿಸಿ ಎಂಬ ಸಂದೇಶವೂ ಹೌದು" ಎಂದು ಹೇಳಿದರು.
"ನಮ್ಮ ಎಲ್ಲ ಶಾಸಕರು ಒಗ್ಗಟ್ಟಿನಿಂದ ಮತ ಚಲಾಯಿಸಿದ್ದಾರೆ. ಪಕ್ಷೇತರ ಶಾಸಕರು, ಬಿಜೆಪಿಯಿಂದ ಉಚ್ಛಾಟನೆಯಾದ ಶಾಸಕರು ಹಾಗೂ ಇತರ ಪಕ್ಷಗಳ ಕೆಲ ಸದಸ್ಯರು ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಅವರು ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಇನ್ನಷ್ಟು ಉತ್ತಮ ಆಡಳಿತ ನೀಡುತ್ತೇವೆ" ಎಂದು ಡಿಕೆಶಿ ಭರವಸೆ ನೀಡಿದರು.
ಕ್ರಾಸ್ ವೋಟಿಂಗ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಗುಪ್ತ ಮತದಾನ. ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಅಥವಾ ಜೆಡಿಎಸ್‌ನಲ್ಲಿ ಏನಾಗಿದೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದರು.

ನಾವು ಯಾರ ಬಳಿಯೂ ಮತ ಕೇಳಿಲ್ಲ!

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, "ಈ ಫಲಿತಾಂಶ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ಇದು ಸ್ಪಷ್ಟ ಉತ್ತರವಾಗಿದೆ" ಎಂದರು.
"ನಾವು ಯಾರ ಬಳಿಯೂ ಮತ ಕೇಳಿಲ್ಲ. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಮಾತ್ರ ಮನವಿ ಮಾಡಿದ್ದೆವು. ಅದರಂತೆ ಶಾಸಕರು ಮತ ನೀಡಿದ್ದಾರೆ. ಬಿಜೆಪಿ ಇನ್ನು ರಾಜಕೀಯ ಟೀಕೆಗಳನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು" ಎಂದು ಅವರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net