ಕಾಂಗ್ರೆಸ್​ಗೆ ಸೋಲಿನ ಭೀತಿ / DODABALLAPUR

ಡಾ.ಕೆ.ಸುಧಾಕರ್​
ಡಾ.ಕೆ.ಸುಧಾಕರ್​
Published on
ದೊಡ್ಡಬಳ್ಳಾಪುರ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಕಾಂಗ್ರೆಸ್​ ನಾಯಕರ ವಿರುದ್ಧ ಸಂಸದ ಡಾ.ಕೆ.ಸುಧಾಕರ್​ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಗರಸಭೆ ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗಿಯಾಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಸ್​.ಐ.ಆರ್​. ವಿಚಾರದಲ್ಲಿ ಕಾಂಗ್ರೆಸ್​ ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈಗಿನಿಂದಲೇ ಕಾರಣ ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಮತವನ್ನು ಯಾರೂ ಕಣ್ಮುಚ್ಚಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಪ್ರತಿ ಪಕ್ಷದಲ್ಲಿಯೂ ಬಿಎಲ್​ಎ-2 ಪ್ರತಿನಿಧಿಗಳು ಇರುತ್ತಾರೆ. ಜತೆಗೆ ಅಧಿಕಾರಿಗಳಾಗಿ ಬಿಎಲ್​ಒಗಳು ಕಾರ್ಯರ್ನಿಹಿಸುತ್ತಾರೆ. ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರು ಇದ್ದರೆ ಅದನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.
ಬೇರೆ ದೇಶಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ನೆಲೆಸಿರುವವರ ಹೆಸರು ಮತಪಟ್ಟಿಯಲ್ಲಿ ಉಳಿಯಬೇಕೇ ಎಂಬ ಪ್ರಶ್ನೆಯೂ ಇದೆ. ಆದರೆ, ಗ್ರಾಮದಲ್ಲಿ ವಾಸವಾಗಿರುವ ವ್ಯಕ್ತಿಗಳ ಹೆಸರನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರಿಗೆ ಅನ್ಯಾಯವಾಗಿದ್ದರೆ ಸಂಬಂಧಪಟ್ಟ ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಲು ಅವಕಾಶವಿದೆ. ಕಾಂಗ್ರೆಸ್​ ನಾಯಕರು ರಾಜಕೀಯ ದುರುದ್ದೇಶದಿಂದಲೇ ಜನರಲ್ಲಿ ಗೊಂದಲ ಸೃಷ್ಟಿಸುವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಈ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ತಪು$್ಪ ಇದ್ದಲ್ಲಿ ಕೋರ್ಟ್​ ಮೊರೆ ಹೋಗಿ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಬಿಜೆಪಿ ಆಡಳಿತ ಇರುವೆಡೆ ತೈಲ ಬೆಲೆ ಕಡಿಮೆ : ಅಂತಾರಾಷ್ಟ್ರೀಯಮಟ್ಟದಲ್ಲಿ ಯುದ್ಧ ಪರಿಸ್ಥಿತಿ ನಿಮಾರ್ಣವಾಗಿದೆ. ಇರಾನ್​ ಮೂಲಕ ನಮಗೆ ಕಚ್ಚಾ ತೈಲ ಬರುತ್ತಿತ್ತು. ಯುದ್ಧದ ಪರಿಣಾಮ ಕೆಲವು ದೇಶಗಳಲ್ಲಿ ತೈಲದ ಬೆಲೆ ಲೀಟರ್​ಗೆ 300 ರಿಂದ 400 ರೂ.ವರೆಗೆ ಏರಿಕೆಯಾಗಿದೆ ಎಂದು ಸಂಸದರು ಹೇಳಿದರು.
ದೇಶದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ತೈಲದ ಬೆಲೆ ಕಡಿಮೆ ಇದೆ. ಕಾಂಗ್ರೆಸ್​ ಆಡಳಿತದ ರಾಜ್ಯಗಳಲ್ಲಿ ಬೆಲೆ ಹೆಚ್ಚು ಇದೆ. ತೈಲ ಉತ್ಪಾದಕ ರಾಷ್ಟ್ರಗಳಲ್ಲಿಯೂ ಆಯಿಲ್​ ಕಂಪನಿಗಳು ನಷ್ಟದಲ್ಲಿವೆ. ಆದರೂ, ಪ್ರಧಾನಿ ಮೋದಿ ವಿಶೇಷ ಮುತುವರ್ಜಿ ವಹಿಸಿ ಜನರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನವೀನ್​ ರಾಜ್ಯ ಪ್ರವಾಸದಲ್ಲಿದ್ದಾರೆ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ ಸೂಕ್ತ ಉತ್ತರ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರು ನಮ್ಮ ಕುಟುಂಬದವರೇ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net