

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ 'ಫಾರ್ಮ್ 7' ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರಿಗೆ ಅಧಿಕೃತವಾಗಿ ದೂರು ದಾಖಲಿಸಿದೆ.
ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯಗಳ ಹೆಸರುಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದ್ದು, ಎಸ್‌ಐಆರ್ ಪ್ರಕ್ರಿಯೆಯ ಹೆಸರಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಧಿಕೃತ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ಈ ಕೆಳಕಂಡಂತಿವೆ.
1. ಅರ್ಹ ಮತದಾರರ ಹಕ್ಕುಗಳ ರಕ್ಷಣೆ: ಜಾತಿ, ಧರ್ಮ, ಸಮುದಾಯ ಅಥವಾ ಸಾಮಾಜಿಕ ಹಿನ್ನೆಲೆಯನ್ನು ಲೆಕ್ಕಿಸದೆ ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕನ್ನು ಕಾಪಾಡುವುದು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುವುದನ್ನು ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.
2. ಬೃಹತ್ ಪ್ರಮಾಣದಲ್ಲಿ ಸಲ್ಲಿಕೆಯಾಗಿರುವ 'ಫಾರ್ಮ್ 7' ಅರ್ಜಿಗಳು: ನಿಗದಿತ ಕಾಲಾವಧಿಯ ಕೊನೆಯ ದಿನಗಳಲ್ಲಿ (ಸೆಪ್ಟೆಂಬರ್ 22, 23 ಮತ್ತು 24 ರಂದು ಸೇರಿದಂತೆ) ಮತದಾರರ ಹೆಸರುಗಳನ್ನು ಕೈಬಿಡಲು ಕೋರಿ ಬೃಹತ್ ಪ್ರಮಾಣದಲ್ಲಿ 'ಫಾರ್ಮ್ 7' ಅರ್ಜಿಗಳನ್ನು ಒಟ್ಟಾರೆಯಾಗಿ ಸಲ್ಲಿಕೆ ಮಾಡಲಾಗಿದೆ.
3. ನಿರ್ದಿಷ್ಟ ಸಮುದಾಯಗಳೇ ಗುರಿ: ಬೆಳಗಾವಿ ಉತ್ತರ (ಸುಮಾರು 3,000), ಮೂಡಿಗೆರೆ (6,259), ಬಬಲೇಶ್ವರ (1,373), ನರಸಿಂಹರಾಜ (1,200) ಮತ್ತು ಭಾಲ್ಕಿ (2,285) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಮತದಾರರನ್ನೇ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗಿದೆ ಎಂಬ ಶಂಕೆ ಇದೆ.
4. ಪ್ರೀ-ಪ್ರಿಂಟೆಡ್ (Pre-printed) ಅರ್ಜಿಗಳ ಬಳಕೆ: ಅನೇಕ ಅರ್ಜಿಗಳಲ್ಲಿ ಮತದಾರರ ಹೆಸರು, ಇಪಿಐಸಿ (EPIC) ಸಂಖ್ಯೆ ಹಾಗೂ ಇತ್ಯಾದಿ ವಿವರಗಳನ್ನು ಮೊದಲೇ ಮುದ್ರಿಸಿ (Pre-printed) ನಂತರ ಆಕ್ಷೇಪಣೆ ಸಲ್ಲಿಸುವವರ ವಿವರಗಳನ್ನು ಮಾತ್ರ ಭರ್ತಿ ಮಾಡಲಾಗಿದೆ.
5. ಚುನಾವಣಾ ದತ್ತಾಂಶದ (Data) ಗೌಪ್ಯತೆ ಮತ್ತು ಭದ್ರತೆ ಉಲ್ಲಂಘನೆ: ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿ ಮಾತ್ರ ಸುರಕ್ಷಿತವಾಗಿರಬೇಕಾದ ಮತದಾರರ ವೈಯಕ್ತಿಕ ವಿವರಗಳು ಮತ್ತು ಇಪಿಐಸಿ ಮಾಹಿತಿ ದುಷ್ಕರ್ಮಿಗಳಿಗೆ ಹೇಗೆ ಲಭ್ಯವಾಯಿತು ಎಂಬುದರ ಕುರಿತು ದತ್ತಾಂಶ ಭದ್ರತೆಯ ದೃಷ್ಟಿಯಿಂದ ಗಂಭೀರ ತನಿಖೆಯಾಗಬೇಕು.
6. ರಾಜಕೀಯ ಮುಖಂಡರ ಬಹಿರಂಗ ಒಪ್ಪಿಗೆ: ಬೆಳಗಾವಿ ಉತ್ತರದ ಸೋತ ಬಿಜೆಪಿ ಅಭ್ಯರ್ಥಿ ಡಾ. ರವಿ ಬಿ. ಪಾಟೀಲ್ ಹಾಗೂ ಬಿಜೆಪಿ ಯುವ ಮೋರ್ಚಾದ ಜಾಧವ್ ಅವರು ತಮ್ಮ ಆಪ್ತರ ಮೂಲಕ ದೊಡ್ಡ ಸಂಖ್ಯೆಯಲ್ಲಿ ಫಾರ್ಮ್ 7 ಅರ್ಜಿಗಳನ್ನು ಹಾಕಿಸಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ಲಗತ್ತಿಸಲಾಗಿದೆ.
7. ಮತಗಟ್ಟೆ ಅಧಿಕಾರಿಗಳ (BLO) ಪಾತ್ರ ಹಾಗೂ ವಾಪಸಾತಿ ವಿವರ: ಕೆಲವು ಬಿಎಲ್‌ಒ (BLO) ಗಳು ಈ ರೀತಿ ಬೃಹತ್ ಪ್ರಮಾಣದಲ್ಲಿ ಬಂದಿದ್ದ ಫಾರ್ಮ್ 7 ಅರ್ಜಿಗಳನ್ನು ವಾಪಸ್ ಕಳುಹಿಸಿದ್ದು, ಯಾವೆಲ್ಲಾ ಕ್ಷೇತ್ರಗಳಲ್ಲಿ ಎಷ್ಟು ಅರ್ಜಿಗಳನ್ನು ವಾಪಸ್ ಮಾಡಲಾಗಿದೆ ಹಾಗೂ ಅದಕ್ಕೆ ಕಾರಣಗಳೇನು ಎಂಬುದನ್ನು ಕಲೆಹಾಕಿ ಪರಿಶೀಲಿಸಬೇಕು.
8. ಚುನಾವಣಾ ಸಮಗ್ರತೆ ಮತ್ತು ರಾಜಕೀಯ ಪ್ರಭಾವದ ತನಿಖೆ: ಮತದಾರರ ಜಾತಿ ಅಥವಾ ಸಾಮಾಜಿಕ ಹಿನ್ನೆಲೆ ಆಧರಿಸಿ ಚುನಾವಣಾ ಪ್ರಕ್ರಿಯೆಯನ್ನು ದುರುದ್ದೇಶಪೂರ್ವಕವಾಗಿ ತಿರುಚಲಾಗಿದೆಯೇ ಎಂಬುದನ್ನು ಹಾಗೂ ಇದರ ಹಿಂದೆ ಕೆಲವು ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಸ್ತುನಿಷ್ಠ ತನಿಖೆ ನಡೆಸಬೇಕು.
9. ಕಾಲಮಿತಿಯೊಳಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ: ಕ್ಷೇತ್ರವಾರು ಮತ್ತು ಬೂತ್‌ವಾರು ಫಾರ್ಮ್ 7 ಅರ್ಜಿಗಳ ಸಲ್ಲಿಕೆಯ ಮಾದರಿ, ಅಕ್ರಮವಾಗಿ ದತ್ತಾಂಶ ಪಡೆದವರ ಮೂಲ, ಹಾಗೂ ರಾಜಕೀಯ ಸಂಘಟನೆಗಳು ಇದರ ಹಿಂದೆ ಕೆಲಸ ಮಾಡಿವೆಯೇ ಎಂಬುದರ ಕುರಿತು ಕಾಲಮಿತಿಯೊಳಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ದೂರು ನೀಡುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಸ್‌ಐಆರ್ (SIR) ಪದ್ಧತಿಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಈಗಾಗಲೇ ನಾನಾ ಕಾರಣಗಳಿಂದ 1 ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿದ್ದು, ಸುಮಾರು 50 ಲಕ್ಷಕ್ಕೂ ಅಧಿಕ ಜನರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಜಾಸೇವಕನಾಗಿ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸುತ್ತಿದ್ದರೂ, ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಎಂದು ಸಿಎಂ ಡಿಕೆಶಿ ಹೇಳಿದರು.
ಎಸ್‌ಐಆರ್ ನೆಪದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ದೊಡ್ಡ ಮಟ್ಟದ ರಾಜಕೀಯ ಕುತಂತ್ರ ನಡೆಯುತ್ತಿದೆ. ಬಿಜೆಪಿ ನಾಯಕರ ನೇರ ನಿರ್ದೇಶನದ ಮೇರೆಗೆ ಸೋತ ಅಭ್ಯರ್ಥಿಗಳು ಮತ್ತು ಸ್ಥಳೀಯ ಮುಖಂಡರು ಕಾಂಗ್ರೆಸ್ ಹಾಲಿ ಶಾಸಕರಿರುವ ಕ್ಷೇತ್ರಗಳನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಈಶ್ವರ್ ಖಂಡ್ರೆ ಅವರ ಭಾಲ್ಕಿ, ನಯನಾ ಮೋಟಮ್ಮ ಅವರ ಮೂಡಿಗೆರೆ ಹಾಗೂ ತನ್ವೀರ್ ಸೇಠ್ ಅವರ ನರಸಿಂಹರಾಜ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು 'ಫಾರ್ಮ್ 7' ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಡಿಕೆಶಿ ದೂರಿದ್ದಾರೆ.
ಈ ಅಕ್ರಮ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಹಾಗೂ ಚುನಾವಣಾ ಆಯೋಗಕ್ಕೆ ಸ್ಪಷ್ಟ ಸಾಕ್ಷ್ಯಗಳನ್ನು ಒದಗಿಸಲು ಕಾಂಗ್ರೆಸ್ ಪಕ್ಷವು ಮುಂದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಪಕ್ಷದ ಆಂತರಿಕ ವೇದಿಕೆಗಳ ಮೂಲಕ ವಿಶೇಷ ಸಂದೇಶ ಹಂಚಿಕೊಂಡಿರುವ ಸಿಎಂ ಡಿಕೆಶಿ, ಎಲ್ಲೆಲ್ಲಿ ಅಕ್ರಮವಾಗಿ ಫಾರ್ಮ್ 7 ಸಲ್ಲಿಕೆ ಮಾಡಲಾಗಿದೆಯೋ ಆ ಎಲ್ಲಾ ವಿವರಗಳನ್ನು ಮುಂದಿನ 12 ಗಂಟೆಗಳ ಒಳಗಾಗಿ ತಮಗೆ ತಲುಪಿಸುವಂತೆ ಪಕ್ಷದ ಬಿಎಲ್‌ಎ (BLA) ಹಾಗೂ ಬಿಎಲ್‌ಓ (BLO) ಗಳಿಗೆ ತುರ್ತು ಮನವಿ ಮಾಡಿದ್ದಾರೆ. ಪಕ್ಷದ ತಳಮಟ್ಟದ ಕಾರ್ಯಕರ್ತರು ಎಚ್ಚೆತ್ತುಕೊಂಡು ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಿಎಂ ಕರೆ ನೀಡಿದ್ದಾರೆ.
ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರ ಮತದ ಹಕ್ಕು ಕಸಿಯಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ತನಿಖೆ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ. ಈ ಗಂಭೀರ ವಿಚಾರವಾಗಿ ಖುದ್ದಾಗಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿರುವ ನಾಯಕರು, ಅಕ್ರಮವನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ನಿರ್ಧರಿಸಿದ್ದಾರೆ. ಪಕ್ಷದ ವತಿಯಿಂದ ಸಂಗ್ರಹಿಸಲಾಗುವ ಫಾರ್ಮ್ 7 ಗೆ ಸಂಬಂಧಿಸಿದ ಎಲ್ಲಾ ನಿಖರ ಮಾಹಿತಿ ಮತ್ತು ದಾಖಲೆಗಳನ್ನು ತಕ್ಷಣವೇ ಅಧಿಕೃತ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಸೂಚಿಸಲಾಗಿದೆ.
ಪ್ರತಿ ನಾಗರಿಕನಿಗೆ ಸಂವಿಧಾನ ನೀಡಿರುವ ಮತದಾನದ ಹಕ್ಕು ಅತ್ಯಂತ ಪವಿತ್ರವಾಗಿದ್ದು, ಅದನ್ನು ಕಸಿಯುವ ಯಾವುದೇ ಯತ್ನವನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದ್ದಾರೆ. ರಾಜ್ಯದ ಜನಸಾಮಾನ್ಯರು, ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಈ ನಯವಂಚಕ ಜಾಲದ ವಿರುದ್ಧ ಎಚ್ಚೆತ್ತುಕೊಂಡು ಅತ್ಯಂತ ಜಾಗರೂಕರಾಗಿರಬೇಕು ಎಂದು ಮನವಿ ಮಾಡಲಾಗಿದೆ. ಪ್ರಜಾಪ್ರಭುತ್ವದ ಕೊಂಡಿಯನ್ನು ಗಟ್ಟಿಗೊಳಿಸಲು ಮತ್ತು ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕನ್ನು ಕಾಪಾಡಲು ಮುಂಬರುವ ದಿನಗಳಲ್ಲಿ ಪಕ್ಷದ ವತಿಯಿಂದ ಮತ್ತಷ್ಟು ಕಾನೂನು ಹಾಗೂ ಜನಪರ ಹೋರಾಟಗಳನ್ನು ತೀವ್ರಗೊಳಿಸುವುದಾಗಿ ಸಿಎಂ ಡಿಕೆಶಿ ತಿಳಿಸಿದ್ದಾರೆ.
ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ಬಳಸಲಾಗುವ 'ಫಾರ್ಮ್ 7' (Form 7) ಎನ್ನುವುದು ಮೂಲತಃ ಮತದಾರರ ಪಟ್ಟಿಯಿಂದ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಅನರ್ಹರ ಹೆಸರನ್ನು ತೆಗೆದುಹಾಕಲು ಅಥವಾ ಹೊಸದಾಗಿ ತಪ್ಪಾಗಿ ಸೇರ್ಪಡೆಯಾಗುವುದನ್ನು ಆಕ್ಷೇಪಿಸಲು ಬಳಸುವ ಅಧಿಕೃತ ಕಾನೂನುಬದ್ಧ ಅರ್ಜಿಯಾಗಿದೆ. ಆದರೆ, ಪ್ರಸ್ತುತ ಈ ಫಾರ್ಮ್ ಅನ್ನು ರಾಜಕೀಯ ದುರುದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಂಡು, ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಕಾರಣವಿಲ್ಲದೆ ಜೀವಂತವಿರುವ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.