ಅಕ್ಷರ ಲೋಕದ ಅನರ್ಘ್ಯ ರತ್ನ 'ಅನಾಜಿ'ಗೆ ಅಭಿನಂದನೆ: 'ಸಾಹಿತ್ಯ ಪರಿಚಾರಕ' ಗ್ರಂಥ ಲೋಕಾರ್ಪಣೆ.. Anaji
ಅಕ್ಷರ ಲೋಕದ ಅನರ್ಘ್ಯ ರತ್ನ ಅನಾಜಿ
Published on:
Copied
Follow Us
ಬೆಂಗಳೂರು: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಬೆಳವಣಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಹಿರಿಯ ವಿದ್ವಾಂಸ ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಸಾಹಿತ್ಯ ಲೋಕದಲ್ಲಿ 'ಅನಾಜಿ' (Anaji) ಎಂದೇ ಚಿರಪರಿಚಿತರು. ಕಳೆದ ಏಳು ದಶಕಗಳಿಂದ ಅವರು ಲೇಖಕರಾಗಿ, ವಾಗ್ಮಿಗಳಾಗಿ, ಸಂಶೋಧಕರಾಗಿ ಮತ್ತು ಆದರ್ಶ ಅಧ್ಯಾಪಕರಾಗಿ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು.
ಇವರು ಮೂರು ದಶಕಗಳ ಕಾಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿರಂತರವಾಗಿ ಆಡಳಿತ ಕನ್ನಡ ಶಿಬಿರಗಳನ್ನು ನಿರ್ವಹಿಸಿ ಕನ್ನಡ ಕಲಿಸಿ ಕೊಟ್ಟಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿರುವ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದು, ಎಂ.ಎ. ಪಿಹೆಚ್.ಡಿ, ಕೆ.ಎ.ಎಸ್, ಐ.ಎ.ಎಸ್. ಎಂಫಿಲ್ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪಾಠ ಮಾಡುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ.
ಸಿಂಚನ ಕನ್ನಡ ವೇದಿಕೆಯ ಮುಖಾಂತರ 30 ಗ್ರಂಥಗಳನ್ನು ಸಂಪಾದಿಸಿದ ಇವರು ಜ್ಞಾನಜ್ಯೋತಿ ರೇಡಿಯೋ ಕಾರ್ಯಕ್ರಮದ ಮೂಲಕ 50 ಸಾಹಿತ್ಯೋಪನ್ಯಾಸಗಳನ್ನು ನೀಡಿ ಕನ್ನಡ ಸಾಹಿತ್ಯದ ಕಣ್ಮಣಿಗಳನ್ನು ಜನರಿಗೆ ಪರಿಚಯಿಸಿದ್ದಾರೆ.
ಕರ್ನಾಟಕ ಸರ್ಕಾರ ಪ್ರಕಟಿಸಿರುವ 50 ಸಂಪುಟಗಳ ಸಮಗ್ರ ದಾಸಸಾಹಿತ್ಯ ಯೋಜನೆಯ ಸಹ ಸಂಪಾದಕರಾಗಿ ಗ್ರಂಥಗಳನ್ನು ಅಚ್ಚಿಗೆ ಸಿದ್ಧಪಡಿಸಿದ್ದು, ನಾಡಿನಾದ್ಯಂತ ಕನ್ನಡ ನಾಡು-ನುಡಿಗಳ ಬಗ್ಗೆ ಸಾವಿರಾರು ಉಪನ್ಯಾಸ ನೀಡಿದ ವಾಗ್ಮಿಗಳಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಪರಿಷತ್ತಿನ "ಶತಮಾನದ ಇತಿಹಾಸ" ಗ್ರಂಥ ರಚಿಸಿದ್ದಾರೆ.
ಇವರು ಕರ್ನಾಟಕ ಗಾನ ಕಲಾಪರಿಷತ್ತು, ದೇವುಡು ಪ್ರತಿಷ್ಠಾನಗಳ ಸ್ಥಾಪಕರಾಗಿ, ಅ.ನ.ಕೃ., ಎಂ. ರಾಮಮೂರ್ತಿ ಅವರ ಕನ್ನಡ ಚಳುವಳಿಯ ಪ್ರಾರಂಭದ ಕಾರ್ಯಕರ್ತರಾಗಿ ಹತ್ತಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ದೊರೆತ ಪ್ರಶಸ್ತಿಗಳು
ಪ್ರೊ. ಜಿ. ಅಶ್ವತ್ಥನಾರಾಯಣ ಅವರ ಕನ್ನಡ ಸೇವೆಯನ್ನು ಮೆಚ್ಚಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥ ಪ್ರಶಸ್ತಿ, ಕುವೆಂಪುಶ್ರೀ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ದಾಸ ಸಾಹಿತ್ಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮುಂತಾದ ಸೇವಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ಅಧ್ಯಾಪನ ಕ್ಷೇತ್ರದಲ್ಲಿ ಏಳು ದಶಕಗಳ ಕಾಲ ಅನನ್ಯ ಸೇವೆ ಸಲ್ಲಿಸಿರುವ ಪ್ರೊ. ಜಿ. ಅಶ್ವತ್ಥನಾರಾಯಣ ಅವರಿಗೆ ನಾಡಿನ ಪರವಾಗಿ ಕೃತಜ್ಞತೆ ಸಲ್ಲಿಸಲು 'ಸಾಹಿತ್ಯ ಪರಿಚಾರಕ' ಎಂಬ ವಿಶೇಷ ಅಭಿನಂದನಾ ಗ್ರಂಥವನ್ನು ಡಾ. ಟಿ ವಿ ರಾಜು, ಬಿ ಕೆ ಗೋಪಣ್ಣ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.
ಆದಾಗ್ಯೂ, ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ಮತ್ತು ವೂಢೇ ಪಿ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಪ್ರೊ. ಜಿ. ಅಶ್ವತ್ಥನಾರಾಯಣ ಅಭಿನಂದನಾ ಸಮಿತಿಯನ್ನು ರಚಿಸಲಾಗಿದೆ.
ಅಭಿನಂದನಾ ಸಮಾರಂಭವನ್ನು ಇದೇ ಶನಿವಾರ (ಜ.31) ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಜಯನಗರ 4ನೆ ಬ್ಲಾಕ್, ವಿಜಯ ಪಿಯು ಕಾಲೇಜು ಆವರಣದ ಬಿ ವಿ ನಾರಾಯಣರಾವ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ ಟಿ ವಿ ರಾಜು, ಬಿ ಕೆ ಗೋಪಣ್ಣ ಪ್ರಕಟಣೆ ಹೊರಡಿಸಿದ್ದಾರೆ.