ಎಕರೆ ಜಮೀನಿಗೆ ₹2.70 ಕೋಟಿ ಪರಿಹಾರ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಸ್ವಯಂಪ್ರೇರಿತವಾಗಿ ಬಿಟ್ಟುಕೊಡುತ್ತಿರುವ ರೈತರ ಪ್ರತಿ ಎಕರೆಗೆ ಸರ್ಕಾರ 2.70 ಕೋಟಿ ರೂ. ಬೆಲೆ ನಿಗದಿ ಮಾಡಿದೆ.
ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್. ರಘುನಂದನ್ ಅಧ್ಯಕ್ಷತೆಯಲ್ಲಿ ಬುಧವಾರ ಅರವಿಂದ ಭವನದಲ್ಲಿ ನಡೆದ ಅಧಿಕಾರಿಗಳು ಭೂಮಾಲೀಕರ ಜಂಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಒಪ್ಪಿರುವ 120 ಎಕರೆ ಜಮೀನಿಗೆ ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರವನ್ನು ಭೂ ದರ ನಿರ್ಧಾರಣಾ ಸಲಹಾ ಸಮಿತಿ ನಿಗದಿಪಡಿಸಿ ಕೆಐಎಡಿಬಿಗೆ ಶಿಫಾರಸು ಮಾಡಿದೆ. ಈ ತೀರ್ಮಾನವನ್ನು ಕೆಐಎಡಿಬಿ ಮಂಡಳಿ ಅನುಮೋದನೆಗಾಗಿ ಕಳುಹಿಸಿಕೊಡಲಾಗುವುದು. ಪರಿಹಾರವನ್ನು ಹಣದ ರೂಪದಲ್ಲಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಪ್ರತಿ ಎಕರೆ ಕೃಷಿ ಜಮೀನಿಗೆ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ರಘುನಂದನ್ ತಿಳಿಸಿದ್ದಾರೆ.
ಜಮೀನುಗಳನ್ನು ರೈತರು ತಾವಾಗಿಯೇ ಬಿಟ್ಟುಕೊಡುತ್ತಿದ್ದು, ಕೆಐಎಡಿಬಿ ಕಾಯ್ದೆ ಅನುಸಾರ ಜೂ.16ರಂದು ಅಂತಿಮ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈಗ ನಿಗದಿಪಡಿಸಿರುವ ಪರಿಹಾರ ದರವು ದೇವನಹಳ್ಳಿ ಭಾಗದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಕೊಡಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಸೂರಜ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net