ಮಾಲೀಕನಿಗೂ ಕಾರ್ಮಿಕರ ಪರಿಹಾರ ಕಾಯ್ದೆ ಅನ್ವಯ| High court

High court
High court
Published on
ಬೆಂಗಳೂರು: ಸಣ್ಣ ಕೈಗಾರಿಕೆ ಅಥವಾ ಉದ್ದಿಮೆಗಳ ಮಾಲೀಕರು ತಾವೇ ಸ್ವತಃ ಅಪಾಯಕಾರಿ ಅಥವಾ ತಾಂತ್ರಿಕ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಅಪಘಾತ ಸಂಭವಿಸಿದರೆ, ಅವರನ್ನು "ಕಾರ್ಮಿಕ' ಎಂದೇ ಪರಿಗಣಿಸಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಕಾರ್ಖಾನೆಯೊಂದರಲ್ಲಿ ಬಾಯ್ಲರ್​ ಸ್ಫೋಟಗೊಂಡು ಮೃತಪಟ್ಟ ರಾಯಚೂರಿನ ವೆಂಕಟಾಚಲ ರಾಜಗೋಪಾಲ ಎಂಬುವರ ಕುಟುಂಬಕ್ಕೆ ಕಾರ್ಮಿಕರ ಪರಿಹಾರ ಕಾಯ್ದೆ ಅಡಿಯಲ್ಲಿ ಪರಿಹಾರ ನೀಡಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರಜ್​ ಗೋವಿಂದರಾಜ್​ ಮತ್ತು ಚಿಲ್ಲಕೂರು ಸುಮಲತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಮೃತರ ಕುಟುಂಬಕ್ಕೆ 7.7 ಲಕ್ಷ ರೂಪಾಯಿ ಪರಿಹಾರವನ್ನು ಶೇ. 12ರಷ್ಟು ಬಡ್ಡಿಯೊಂದಿಗೆ ನೀಡುವಂತೆ ಕೆಲಸದ ಗುತ್ತಿಗೆ ನೀಡಿದ್ದ ಕಂಪನಿ ಮತ್ತು ವಿಮಾ ಕಂಪನಿಗೆ ಆದೇಶಿಸಿದೆ.
ವೆಂಕಟಾಚಲ ಅವರು ಕಾರ್ಖಾನೆಗಳ ಬಾಯ್ಲರ್​ ರಿಪೇರಿ ಮಾಡುವ ಕಂಪನಿಯೊಂದರ ಮಾಲೀಕರಾಗಿದ್ದರು. ಬಳ್ಳಾರಿಯ ಹೊಸಪೇಟೆಯಲ್ಲಿರುವ ಕಾರ್ಖಾನೆಯೊಂದು ತನ್ನ ಬಾಯ್ಲರ್​ ಸರಿಪಡಿಸುವ ಕೆಲಸದ ಗುತ್ತಿಗೆಯನ್ನು ವೆಂಟಟಾಚಲ ಅವರಿಗೆ ನೀಡಿತ್ತು. ಈ ಕೆಲಸದಲ್ಲಿ ತೊಡಗಿದ್ದ ವೇಳೆ ಬಾಯ್ಲರ್​ ಸ್ಪೋಟಗೊಂಡು 2016ರ ಜೂ. 6ರಂದು ಅವರು ಮೃಟಪಟ್ಟಿದ್ದರು. ಮೃತರು ಕಂಪನಿಯ ಮಾಲೀಕರಾಗಿದ್ದ ಕಾರಣ ಕಾರ್ಮಿಕರ ಪರಿಹಾರ ಕಾಯ್ದೆ ಅಡಿ ಪರಿಹಾರ ನೀಡಲಾಗದು ಎಂದು ವಿಮಾ ಕಂಪನಿ ವಾದಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ತಾಂತ್ರಿಕ ಕಾರಣಕ್ಕೆ ನಿರಾಕರಣೆ ಬೇಡ:

ದೇಶದಲ್ಲಿ ಬಹುಪಾಲು ವಾಣಿಜ್ಯ ಚಟುವಟಿಕೆಗಳು ಏಕವ್ಯಕ್ತಿ ಮಾಲಿಕತ್ವದ ಸಣ್ಣ ಸಂಸ್ಥೆಗಳ ಮೂಲಕ ನಡೆಯುತ್ತವೆ. ದೊಡ್ಡ ಕಾರ್ಪೊರೇಟ್​ ಸಂಸ್ಥೆಗಳಿಗಿಂತ ಭಿನ್ನವಾಗಿ, ಇಂತಹ ಸಣ್ಣ ಸಂಸ್ಥೆಗಳಲ್ಲಿ ಮಾಲೀಕರೇ ತಂತ್ರಜ್ಞ, ಮೇಲ್ವಿಚಾರಕ ಮತ್ತು ಮ್ಯಾನೇಜರ್​ ಆಗಿ ಎಲ್ಲ ಕೆಲಸಗಳನ್ನು ಒಟ್ಟಾಗಿ ಮಾಡುತ್ತಾರೆ. ಅವರು ತಾವೇ ಗುತ್ತಿಗೆ ಪಡೆದು, ಖುದ್ದಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರನ್ನು ಕೇವಲ ಮಾಲೀಕ ಎಂದು ಪರಿಗಣಿಸಿ ಕಾರ್ಮಿಕರ ಪರಿಹಾರ ಕಾಯ್ದೆಯಿಂದ ಹೊರಗಿಡಲು ಸಾಧ್ಯವಿಲ್ಲ. ಇಂತಹ ತಾಂತ್ರಿಕ ವಾದಗಳನ್ನು ಮುಂದಿಟ್ಟು ಅವಲಂಬಿತರಿಗೆ ಪರಿಹಾರ ನಿರಾಕರಿಸಲಾಗದು ಎಂದು ನ್ಯಾಯಪೀಠ ಹೇಳಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net