_1779733592034.webp?w=480&auto=format%2Ccompress&fit=max)
_1779733592034.webp?w=480&auto=format%2Ccompress&fit=max)
ವಯಸ್ಸಾಗುವುದು ಸಹಜ ಸ್ವಾಭಾವಿಕ. ವಯಸ್ಸಾದಂತೆ ಶಾರೀರಿಕ, ಮಾನಸಿಕ ಬದಲಾವಣೆಗಳ ಜತೆ, ಕೆಲವರ ನಡೆ ನುಡಿ, ವರ್ತನೆ ವ್ಯವಹಾರ, ಯೋಚನಾ ಕ್ರಮಗಳಲ್ಲಿ ಕೂಡ ಪರಿವರ್ತನೆಗಳನ್ನು ಕಾಣಬಹುದು. ಇವು ಅವರ ಗಮನಕ್ಕೆ ಬಾರದಿದ್ದರೂ, ಇತರರ ಗಮನಕ್ಕೆ ಬೇಗನೆ ಬಂದು ಬಿಡುತ್ತದೆ. ಗಮನಕ್ಕೆ ಬಂದರೂ, ಹೆಚ್ಚಿನವರು ಅದಕ್ಕೆ ಪ್ರತಿಕ್ರಿಯಿಸದೆ, ವಯಸ್ಸಾದವರು ಎಂಬ ಕಾರಣಕ್ಕೆ ನಕ್ಕು ಸುಮ್ಮನಾಗಿಬಿಡುತ್ತಾರೆ. ಆದರೆ ಜಾಣರಂತೆ ವೃದ್ಧರೇ ಇದನ್ನು ಅರಿತುಕೊಂಡು ಒಂದಿಷ್ಟು ಬದಲಾದರೆ, ಅವರಿಗೂ ಅವರ ಸಂಪರ್ಕದಲ್ಲಿರುವವರಿಗೂ ಶಾಂತಿ, ನೆಮ್ಮದಿ.
ವೃದ್ಧರು ಮಾಡುವ ತಪ್ಪು ಕೆಲಸಗಳೆಂದರೆ ಸದಾ ಗೊಣಗುವ ಸ್ವಭಾವ. ಈ ಜಗತ್ತಿನಲ್ಲಿ ಯಾವುದೂ ಸರಿ ಇಲ್ಲ; ಯಾರೂ ಸರಿ ಇಲ್ಲ’ ಎಂಬ ನಕಾರಾತ್ಮಕ ಧೋರಣೆ. ಹೇಗಿದ್ದೀರಿ? ಎಂದು ಕೇಳಿದರೆ, ‘ಇದ್ದೀವಿ ನೋಡಿ, ಇನ್ನೂ ಸತ್ತಿಲ್ಲ; ಮಕ್ಕಳು ಬದುಕಲು ಬಿಡೋಲ್ಲ, ಡಾಕ್ಟರುಗಳು ಸಾಯಲು ಬಿಡೋಲ್ಲ’ ಎಂಬ ಆಪಾದನೆ. ಇದರ ಬದಲಿಗೆ ಕೊಂಚ ಸಕಾರಾತ್ಮಕವಾಗಿ ಯೋಚಿಸಲು ಆರಂಭಿಸಿದರೆ, ಎಲ್ಲವೂ ಚೆಂದ; ಎಲ್ಲರೂ ಚೆಂದ, ಬದುಕೂ ಸುಂದರ. ವಯಸ್ಸಾದಂತೆ, ವಯೋಸಹಜವಾದ ಸಣ್ಣಪುಟ್ಟ ಕಾಯಿಲೆಗಳು, ವೈಫಲ್ಯಗಳು ಸಹಜ ಎಂಬುದನ್ನು ಮರೆತು, ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ, ಸಿಕ್ಕ ಸಿಕ್ಕವರಲ್ಲಿ ಹೇಳುವ ಸ್ವಭಾವ ಕೆಲವರದು. ಕಾಯಿಲೆಗಳು ಇಲ್ಲದವರಾರು? ಸುಖ ಸಂತೋಷ ಪಡೆಯಲು ಅನೇಕ ಇತರ ವಿಷಯಗಳೂ ಇರುವ ಕಾರಣ ಆರೋಗ್ಯವೊಂದೇ ಜೀವನದ ವಸ್ತು ಆಗಬಹುದು. ಅಂತೆಯೇ ಅದನ್ನು ವೈದ್ಯರ ಹೊರತಾಗಿ, ಎಲ್ಲರ ಜೊತೆ ಹೇಳಿಕೊಳ್ಳುವ ಅವಶ್ಯಕತೆಯೂ ಇಲ್ಲ.
ಅದರಲ್ಲಿ ಅರ್ಥವೂ ಇಲ್ಲ. ವಯಸ್ಸಾದಂತೆ ಸುರಕ್ಷತಾ ಮುಂಜಾಗರೂಕತೆಗಳನ್ನು ಪಾಲಿಸುತ್ತಾ, ತಮ್ಮನ್ನು ತಾವೇ ನೋಡಿಕೊಳ್ಳುವ ಪರಿಪಾಠ ಕ್ಷೇಮ. ಹೆಚ್ಚಿನ ವೃದ್ಧರು, ವೈಯಕ್ತಿಕ ಶಿಸ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದಿಲ್ಲ. ಕಾಲಕಾಲಕ್ಕೆ ಹಿತಮಿತವಾದ ಎಲ್ಲ ಪೋಷಕಾಂಶಗಳನ್ನು ಹೊಂದಿದ ಸಮತೋಲನ ಆಹಾರವನ್ನು ಸೇವಿಸುವ, ನಿಯಮಿತ ವ್ಯಾಯಾಮ ಮಾಡುವ, ಸಾಕಷ್ಟು ವಿಶ್ರಾಂತಿಯನ್ನು ಪಡೆಯುವ ದಿನಚರಿ ಇವರದಾಗಿರುವುದಿಲ್ಲ. ಅಭ್ಯಂಗ ಸ್ನಾನ, ಶುಭ್ರ ಉಡುಪು, ಉತ್ತಮ ಆಹಾರ-ಅಭ್ಯಾಸ, ಹವ್ಯಾಸಗಳೇ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ತಲೆಮಾರು ಅಂತರ ಒಂದು ಸಹಜ ಪ್ರಕ್ರಿಯೆ. ಎರಡೂ ತಲೆಮಾರಿ ನವರು ಕೊಂಚ ಹೊಂದಾಣಿಕೆ ಮಾಡಿಕೊಂಡರೆ, ಅಂತರವನ್ನು ಕಡಿಮೆಗೊಳಿಸಬಹುದು. ಇದಕ್ಕೆ ಬೇಕಾದುದು, ಒಬ್ಬರನ್ನೊಬ್ಬರು ಅವರ ದೃಷ್ಟಿಕೋನದಿಂದಲೂ, ಅರ್ಥೈಸಿ ಕೊಳ್ಳುವ ವಿಶಾಲಗುಣ. ಹೆಚ್ಚಿನ ವೃದ್ಧರು ಇತರರನ್ನು, ಮುಖ್ಯವಾಗಿ ಯುವಕರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.
ಹೊಂದಾಣಿಕೆಯ ಕೊರತೆ: ಬದಲಾಗುವ ಕಾಲಕ್ಕೆ ತಕ್ಕಂತೆ, ಸಂಸಾ ರದ ಹಾಗೂ ಸಮಾಜದ ಸದಸ್ಯರಿಗೆ ಬೇಕಾದಂತೆ, ತಮ್ಮ ವಯೋಧರ್ಮಕ್ಕೆ ತಕ್ಕಂತೆ ಪರಿವರ್ತನೆ ಹೊಂದಲು ನಿರಾ ಕರಿಸುತ್ತಾರೆ. ಒಳ್ಳೆಯದನ್ನು, ಹೊಸತನ್ನು ಕಲಿಯಲೂ ನಿರಾಕರಿಸುತ್ತಾರೆ. ಪರಿಣಾಮವಾಗಿ ಎಲ್ಲರಿಂದಲೂ ದೂರವಾಗುತ್ತಾರೆ. ಇತರರನ್ನು ಅರಿತುಕೊಳ್ಳದೆ, ಪ್ರೀತಿಸದೆ, ನಮ್ಮನ್ನು ಮಾತ್ರ ಪ್ರೀತಿಸುವುದರಿಂದ ಆಗುವ ಅಪಾಯವೆಂದರೆ ನಾವು ಏಕಾಂಗಿಗಳಾಗಿಬಿಡುತ್ತೇವೆ. ಜೀವನದಲ್ಲಿ ನಮಗೆ ಎರಡೇ ಆಯ್ಕೆಗಳು-ಒಂದೋ ಒಪ್ಪಿಗೆ ಇಲ್ಲವೇ ಬದಲಾವಣೆ. ಒಪ್ಪಲು ಸಾಧ್ಯವಿಲ್ಲದುದನ್ನು ಬದಲಾಯಿಸಿ ಬಿಡಬೇಕು. ಬದಲಾಯಿಸಲು ಸಾಧ್ಯವಿಲ್ಲದುದನ್ನು ಒಪ್ಪಿಕೊಂಡು ಬಿಡಬೇಕು.
ಕೇಳುವವರು ಸಿಕ್ಕಿದಾಗಲೆಲ್ಲಾ ಹೆಚ್ಚಿನ ಮುದುಕರು, ತಮ್ಮ ಗತ ವೈಭವದ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಇತರರನ್ನು ಕೇಳುವ ವ್ಯವಧಾನವೇ ಇವರಲ್ಲಿ ಇರುವುದಿಲ್ಲ; ಜತೆಯಲ್ಲಿ ಪರನಿಂದನೆ ಬೇರೆ. ಈ ಸ್ವಪ್ರಶಂಸೆ ಮತ್ತು ಪರನಿಂದನೆ, ಕೇಳುವವರಿಗೆ ಅಹಿತವೂ, ಅಸಹ್ಯವೂ ಆಗಿ ಕಾಣುತ್ತದೆ. ಹೆಚ್ಚಿನ ಮುದುಕರು ಹರಟೆ ಹೊಡೆಯಲೆಂದೇ ಸಂಜೆಯ ವೇಳೆ ಎಲ್ಲೋ ಒಂದು ಕಡೆ ಸೇರುತ್ತಾರೆ. ಮಾತನಾಡಲು ವಿಷಯಗಳ ಕೊರತೆಯಿಲ್ಲದೆ, ರಾಜಕೀಯದಿಂದ ಹಿಡಿದು ಎಲ್ಲಾ ವಿಷಯಗಳ ಮೇಲೆ ಟೀಕೆಟಿಪ್ಪಣಿಗಳನ್ನು ಮಾಡುತ್ತಿರುತ್ತಾರೆ. ಬದಲಾಗಿ ಯಾವುದಾದರೊಂದು ಸದ್ವಿಚಾರದ ಬಗ್ಗೆ ರ್ಚಚಿಸಿದರೆ ಲಾಭದಾಯಕವೂ ಆನಂದದಾಯಕವೂ ಆದೀತಲ್ಲವೇ?
ಕೇಳದೇನೇ ಎಲ್ಲರಿಗೂ ಉಪದೇಶ ಮಾಡುವ, ಬುದ್ಧಿವಾದ ಹೇಳುವ ಸ್ವಭಾವ, ಕೆಲವು ಮುದುಕರದು; ಹೇಳಿದ್ದನ್ನೇ ಹೇಳುವ ರೀತಿ ಕೂಡಾ ಇವರದು. ಕೇಳದೇನೇ ನೀಡುವ ಬುದ್ಧಿವಾದ, ಕೇಳುವವರಿಗೆ ಆಪ್ಯಾಯಮಾನವಲ್ಲ. ಹೇಳುವವರಿಗೆ ಶೋಭೆಯೂ ಅಲ್ಲ. ಎಲ್ಲರೂ ನನ್ನ ಬಗ್ಗೆಯೇ ಯೋಚಿಸುತ್ತಿರಬೇಕು. ನನ್ನ ಸೇವೆಯನ್ನೇ ಮಾಡುತ್ತಿರಬೇಕು ಎಂಬ ಮಹಾದಾಸೆ ಕೆಲವು ಮುದುಕರದ್ದು. ವಾಸ್ತವದಲ್ಲಿ ಇದು ಕಷ್ಟಸಾಧ್ಯವೆಂಬುದು ಅವರಿಗೆ ತಿಳಿಯದು. ಅರ್ಹತೆಗಿಂತ ಮಿಗಿಲಾದ ಅಪೇಕ್ಷೆ ನಿರೀಕ್ಷೆಗಳು ನಿರಾಸೆಗೆ ಕಾರಣವಾಗುತ್ತವೆ ಎಂಬುದೂ ಅವರ ಅರಿವಿಗೆ ಬಾರದು.
ಕೆಲವರಂತೂ ಸದಾ ಗಂಭೀರವಾಗಿರುತ್ತಾರೆ, ಚಿಂತಾಕ್ರಾಂತರಾಗಿರುತ್ತಾರೆ. ನಾವು ಇನ್ನೊಬ್ಬರ ವಿಚಾರದಲ್ಲಿ ತಲೆ ಹಾಕದಿರೋದು ದೊಡ್ಡ ತಪ್ಪು. ಆದರೆ, ನಮ್ಮ ವಿಚಾರದಲ್ಲೂ ತಲೆ ಹಾಕದಿರೋದು ದೊಡ್ಡ ತಪ್ಪು.
ಆದುದರಿಂದ ವೃದ್ಧರಾಗುತ್ತಿದ್ದಂತೆ, ಹಿರಿತನವನ್ನು ಗಳಿಸಿ, ನಾವು ಹಿರಿಯರೂ ಆಗಬೇಕು. ಬರೇ ಮುದುಕರಾಗೋದು ಮಾತ್ರವಲ್ಲ! ಬಡತನದಲ್ಲಿ ಬೆಳೀಬೇಕು. ಸಿರಿತನದಲ್ಲಿ ಬಾಳಬೇಕು. ಹಾಗೂ ಹಿರಿತನದಲ್ಲಿ ಸಾಯಬೇಕು. ಎಲ್ಲಾ ಪಾಠಗಳನ್ನು ಪುಸ್ತಕಗಳೇ ಕಲಿಸೋದಿಲ್ಲ. ಕೆಲವನ್ನು ಕಲಿಯಿರಿ, ಕಲಿಯದಿರಿ. ಜೀವನವೇ ಕಲಿಸುತ್ತಿರುತ್ತದೆ.