ಕಾಲೇಜು ವಿದ್ಯಾರ್ಥಿಗಳೇ ಡ್ರಗ್ಸ್ ಪೆಡ್ಲರ್‌ಗಳ ಟಾರ್ಗೆಟ್!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಸಂಸ್ಥೆಗಳ ಸುತ್ತಲಿರುವ ಕ್ಯಾಂಟೀನ್, ಗೂಡಂಗಡಿಗಳೇ ಅಡ್ಡೆ
  • ಮಹಾನಗರಗಳಲ್ಲೇ ಹೆಚ್ಚು ಮಾರಾಟ

ಸುನೀಲ್ ಹರಿಹರ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಗೆ ಬಲಿಯಾಗುತ್ತಿರುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿರುವ ಕ್ಯಾಂಟೀನ್, ಪಾನ್ ಶಾಪ್, ಗೂಡಂಗಡಿಗಳಲ್ಲಿ ಮಾದಕ ವಸ್ತು ಮಾರಾಟ ಸಲೀಸಾಗಿ ನಡೆಯುತ್ತಿದೆ.
ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಂತಹ ಪ್ರಮುಖ ನಗರಗಳ ಪ್ರತಿಷ್ಠಿತ ಶಾಲಾ-ಕಾಲೇಜುಗಳ ಆಸುಪಾಸಿನಲ್ಲಿ ಮಾದಕ ವಸ್ತುಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುತ್ತಿವೆ. 2025ರಲ್ಲಿ ಬೆಂಗಳೂರು ನಗರವೊಂದರಲ್ಲೇ 27 ಪ್ರಕರಣ ವರದಿಯಾಗಿವೆ. 2026ರಲ್ಲಿ 10 ಕೇಸ್ ದಾಖಲಾಗಿವೆ. ಮಂಗಳೂರು ನಗರದಲ್ಲಿ 2025ರಲ್ಲಿ 3 ಪ್ರಕರಣ ದಾಖಲಾಗಿದ್ದರೆ, 2026ರ ೆಬ್ರವರಿ ವೇಳೆಗೆ 1 ಪ್ರಕರಣ ದಾಖಲಾಗಿದೆ. ಇವು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳು. ಸಾವಿರಾರು ಪ್ರಕರಣಗಳು ಪೊಲೀಸರ ಗಮನಕ್ಕೆ ಬರುವುದೇ ಇಲ್ಲ.

ಅಂಗಡಿಗಳೇ ಅಡ್ಡೆ:

ಕಾಲೇಜು ಆವರಣದ ಸುತ್ತಮುತ್ತ ಇರುವ ಸಣ್ಣ-ಪುಟ್ಟ ಅಂಗಡಿಗಳು, ಪಾನ್‌ಶಾಪ್ ಅಥವಾ ಕ್ಯಾಂಟೀನ್‌ಗಳನ್ನು ಪೆಡ್ಲರ್‌ಗಳು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಅಲ್ಲಿಗೆ ಹೋದಾಗ ರಹಸ್ಯವಾಗಿ ಡ್ರಗ್ಸ್ ಪ್ಯಾಕೆಟ್‌ಗಳನ್ನು ಅವರಿಗೆ ತಲುಪಿಸುತ್ತಾರೆ. ಸಿಗರೇಟ್ ಬಾಕ್ಸ್‌ನಲ್ಲಿ ಅಥವಾ ಚಾಕೋಲೆಟ್ ರ‌್ಯಾಪರ್‌ಗಳ ಮರೆಯಲ್ಲಿ ಇಟ್ಟು ಮಾರಾಟ ಮಾಡಲಾಗುತ್ತದೆ. ಇನ್ನೂ ಮುಂದುವರಿದು ಜಾಲತಾಣದ ಸಹಾಯದಿಂದ ಅನಾಮಧೇಯ ಐಡಿಗಳಿಂದ ಪೆಡ್ಲರ್‌ಗಳನ್ನು ಸಂಪರ್ಕಿಸಿ, ಖರೀದಿಸುತ್ತಿದ್ದಾರೆ. ಇಲ್ಲಿ ಪೆಡ್ಲರ್, ಗ್ರಾಹಕ ಯಾರು ಎಂಬುದು ಯಾರಿಗೂ ತಿಳಿಯುವುದಿಲ್ಲ.

ಅಮಲಿನ ಜಾಲ ಸೃಷ್ಟಿ:

ಶಿಕ್ಷಣ ಸಂಸ್ಥೆಗಳ ಸುತ್ತ ನಗುಮುಖದ ವಿದ್ಯಾರ್ಥಿಗಳನ್ನು ಬೇಟೆಯಾಡಲು ದುಷ್ಟ ಶಕ್ತಿಗಳು ಸಕ್ರಿಯವಾಗಿವೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡ ಪೆಡ್ಲರ್‌ಗಳು, ಅಮಲಿನ ಜಾಲ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಒಬ್ಬ ವಿದ್ಯಾರ್ಥಿಯನ್ನು ವ್ಯಸನಿಯನ್ನಾಗಿ ಮಾಡಿದರೆ ಆತನೇ ಇತರ ಸ್ನೇಹಿತರನ್ನು ಅದೇ ಹಾದಿಗೆ ಎಳೆದು ತರುತ್ತಿದ್ದಾನೆ.
ಪ್ರಕರಣ ಹೆಚ್ಚಳಕ್ಕೆ ಕಾರಣ
  • ಯುವಕರಲ್ಲಿ ನಶೆಯ ಆಸಕ್ತಿ ಹೆಚ್ಚಳ
  • ಪಾರ್ಟಿ ಸಂಸ್ಕೃತಿ ಮತ್ತು ಒತ್ತಡದ ಜೀವನ
  • ನಿರುದ್ಯೋಗ, ಬಡತನ, ಮೋಜು-ಮಸ್ತಿಯ ಗೀಳಿರುವ ಯುವಕರು ಹಣ ಗಳಿಸಲು ದಂಧೆಗೆ ಕಾಲಿಡುತ್ತಿರುವುದು
  • ಡ್ರಗ್ಸ್ ವ್ಯವಹಾರದಲ್ಲಿ ದೊಡ್ಡ ಮಟ್ಟದ ಹಣದ ಹರಿವು ಇರುವುದು

ವರ್ಷದಲ್ಲಿ 12 ಕಿಂಗ್‌ಪಿನ್‌ಗಳ ಬಂಧನ

ಪೊಲೀಸ್ ಇಲಾಖೆ ಡ್ರಗ್ಸ್ ಪೆಡ್ಲರ್‌ಗಳನ್ನು ನಿತ್ಯವೂ ಬೇಟೆಯಾಡುತ್ತಿದೆ. ಆದರೆ ಮೂಲ ಕಿಂಗ್‌ಪಿನ್‌ಗಳನ್ನು ಗುರುತಿಸಿ ಶಿಕ್ಷೆ ಕೊಡಿಸುವಲ್ಲಿ ಸೋತಂತಾಗಿದೆ. ರಾಜ್ಯಾದ್ಯಂತ 2025ರಲ್ಲಿ 6827 ಪೆಡ್ಲರ್‌ಗಳನ್ನು ಬಂಧಿಸಿದ್ದರೂ ಕೇವಲ 12 ಕಿಂಗ್‌ಪಿನ್‌ಗಳನ್ನು ಬಂಧಿಸಲಾಗಿದೆ. ಇನ್ನು 2026ರ ಫೆಬ್ರವರಿ ಅಂತ್ಯದವರೆಗೆ ಒಬ್ಬ ಕಿಂಗ್‌ಪಿನ್ ಸೆರೆ ಸಿಕ್ಕಿದ್ದಾನೆ.

ಶಾಲಾ-ಕಾಲೇಜು ವ್ಯಾಪ್ತಿಯ ಪ್ರಕರಣಗಳು

ನಗರ ವರ್ಷ
ಡ್ರಗ್ಸ್ ಕೇಸ್
ಬಂಧಿತ ಪೆಡ್ಲರ್ಸ್‌
ಬೆಂಗಳೂರು
2025
27
38
ಮಂಗಳೂರು
2025
03
05
ಬೆಂಗಳೂರು
2026
10
05
ಮಂಗಳೂರು
(February 28)
2026
01
02


ಪೊಲೀಸ್ ಇಲಾಖೆ ಪಣ

ಡ್ರಗ್ಸ್‌ಗೆ ಬಲಿಯಾದ ಯುವಕರನ್ನು ರಕ್ಷಿಸಲು ಪೊಲೀಸ್ ಇಲಾಖೆ ‘ಡ್ರಗ್ಸ್ ಮುಕ್ತ ಕರ್ನಾಟಕ’ ನಿರ್ಮಾಣಕ್ಕೆ ಅಭಿಯಾನ ಆರಂಭಿಸಿದೆ. ಈ ಮೂಲಕ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಸಭೆ ನಡೆಸಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಅರಿವು ಮೂಡಿಸುವ ಜತೆಗೆ ಸಂಶಯಾಸ್ಪದ ಅಂಗಡಿಗಳು, ಪಾನ್‌ಶಾಪ್ ಮತ್ತು ಟೀ ಅಂಗಡಿಗಳ ತಪಾಸಣೆ ನಡೆಸುತ್ತಿದೆ. ಇದರ ಜತೆಗೆ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ, ಡಾರ್ಕ್ ವೆಬ್ ಮತ್ತು ಎನ್‌ಕ್ರಿಪ್ಟ್ ಆದ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದೆ. ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಜಾಲಗಳನ್ನು ಪತ್ತೆಹಚ್ಚುವಲ್ಲಿ ಮುಂದಾಗಿದೆ.
ಪೊಲೀಸ್ ಜಾಗೃತಿ ಕಾರ್ಯಕ್ರಮಗಳ ವಿವರ
ವರ್ಷ ಕಾರ್ಯಕ್ರಮಗಳ ಸಂಖ್ಯೆ ವಿದ್ಯಾರ್ಥಿಗಳ ಸಂಖ್ಯೆ
2023 13,998 9,75,859
2024 21,852 14,08,172
2025 32,888 25,32,811
2026 3,270 2,17,908
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net