ಗೋ ರಕ್ಷಣೆ ಗೋ ಸಮ್ಮಾನಕ್ಕಾಗಿ ರಾಜ್ಯಾದ್ಯಂತ 3 ಕೋಟಿ ಸಹಿ ಸಂಗ್ರಹ

ಡಿ.17 ರಂದು ಬೆಂಗಳೂರಿನಲ್ಲಿ ಲಕ್ಷ ಜನರ ಸಮಾವೇಶ
Collection of 3 crore signatures across the state for the protection and honoring of cows.
ಗೋ ರಕ್ಷಣೆ ಗೋ ಸಮ್ಮಾನಕ್ಕಾಗಿ ರಾಜ್ಯಾದ್ಯಂತ 3 ಕೋಟಿ ಸಹಿ ಸಂಗ್ರಹ
Published on: 

ದೇಶಾದ್ಯಂತ ನಡೆಯುತ್ತಿರುವ ಗೋ ಸಮ್ಮಾನ ಆಹ್ವಾನ ಅಭಿಯಾನ ಅಂಗವಾಗಿ ರಾಜ್ಯದಲ್ಲಿ 3 ಕೋಟಿ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅಭಿಯಾನದ ಮುಖ್ಯಸ್ಥ ನಂದಬಾಬಾ ಶ್ರೀ ರವೀಂದ್ರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಅಭಿಯಾನದ ವಕ್ತಾರ ಡಾ. ಆರೂಢ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿಯ ಹಾಲಿನ ನಂತರ ಜೀವಮಾನ ಪರ್ಯಂತ ಹಸುವಿನ ಹಾಲನ್ನು ಕುಡಿಯುತ್ತೇವೆ. ಬದುಕಿನ ಶುದ್ಧ ಆಹಾರದ ಸಾವಯವ ಕೃಷಿಗೆ ಹಸು ಜೀವಾಳ. ಭೂಮಿಯ ಫಲವತ್ತತೆ ಹೆಚ್ಚುವುದು ಗೋ ಗಂಜಲ, ಗೋ ಗೊಬ್ಬರದಿಂದ. ಎಲ್ಲ ಜೀವರಾಶಿಗಳಿಗೆ ಪೃಥ್ವಿ ಆಧಾರವಾದರೆ ಪೃಥ್ವಿಗೆ ಗೋವು ಆಧಾರ. ದೇಶ ಭಾಷೆ ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾನ್ಯ ಗೋವು. ಆದ್ದರಿಂದಲೇ ಗಾವೋ ವಿಶ್ವಸ್ಯ ಮಾತರಃ ಅಂದರೆ ಗೋವುಗಳು ಜಗದ ಮಾತೆಯರು ಎಂದು ವಿವರಿಸಿದರು.

ಅತಿ ದೊಡ್ಡ ಅಭಿಯಾನ:

ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ 90 ಕೋಟಿ ಇದ್ದ ಗೋವುಗಳ ಸಂಖ್ಯೆ ಈಗ 8 ಕೋಟಿಗೆ ಕುಸಿದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಗೋ ಸಂತತಿ ಕಣ್ಮರೆಯಾಗಬಹುದು. ಅದರ ರಕ್ಷಣೆ ಹಾಗೂ ಸಂವರ್ಧನೆ ದೇಶದ ನಮ್ಮೆಲ್ಲರ ಹೊಣೆ. ಗೋವು ಪ್ರಾಣಿಮಾತ್ರವಲ್ಲ, ಅದು ನಮ್ಮೆಲ್ಲರ ಮಾತೆ. ರಾಷ್ಟ್ರ ಪಿತಾ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ ಇದ್ದಂತೆ ಗೋವು ನಮ್ಮ ರಾಷ್ಟ್ರಮಾತೆಯಾಗಬೇಕು, ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ಸಾಧು ಸಂತ ಮಠಾಧೀಶರ ನೇತೃತ್ವದಲ್ಲಿ ಗೋ ಸಮ್ಮಾನ ಆಹ್ವಾನ ಅಭಿಯಾನ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಐದು ಕೋಟಿ ಸಹಿ ಸಂಗ್ರಹ, ಎರಡನೇ ಹಂತದಲ್ಲಿ ಹದಿನೈದು ಕೋಟಿ ಸಹಿ ಸಂಗ್ರಹವಾಗಿದೆ. ಇದೀಗ ಮೂರನೇ ಹಂತದ ಅಭಿಯಾನ ನಡೆಯುತ್ತಿದ್ದು ದೇಶಾದ್ಯಂತ ಮೂವತ್ತೊಂದು ಕೋಟಿ ಸಹಿ ಸಂಗ್ರಹಿಸಲು ಸಂಕಲ್ಪಿಸಲಾಗಿದ್ದು, ಕರ್ನಾಟಕದಲ್ಲಿ 3 ಕೋಟಿ ಸಹಿ ಸಂಗ್ರಹಿಸಿ ಡಿ.17 ರಂದು ಬೆಂಗಳೂರಿನಲ್ಲಿ ಲಕ್ಷ ಜನ ಸೇರಿ ಸಂತರ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು.

ಅಭಿಯಾನಕ್ಕೆ ಸೇರಲು 9067777323 ಸಂಖ್ಯೆಗೆ ಮಿಸ್ ಕಾಲ್ ನೀಡಬೇಕು. ಹೆಚ್ಚಿನ ಮಾಹಿತಿಗೆ ದೂ : 7899923838 ಸಂಪರ್ಕಿಸಬಹುದು.