2ನೇ ದಿನವೂ ರಾಜ್ಯದಲ್ಲಿ ಥರಗುಟ್ಟಿಸುವ ಚಳಿ-winter

 ದಿತ್ವಾ ಸೈಕ್ಲೋನ್
ದಿತ್ವಾ ಸೈಕ್ಲೋನ್
Published on

ಪ್ರಮುಖ ಮುಖ್ಯಾಂಶಗಳು

  • ದಿತ್ವಾ ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಭಾನುವಾರವೂ ಥರಗುಟ್ಟಿಸುವ ಚಳಿ
  • ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಪ್ರದೇಶಗಳಲ್ಲಿ ಇಡೀ ದಿನ ಜಿಟಿಜಿಟಿ ಮಳೆ
  • ವಿಜಯಪುರ, ಧಾರವಾಡದಲ್ಲಿ 12.5 ಡಿ.ಸೆ. ಉಷ್ಣಾಂಶ ದಾಖಲು
ಬೆಂಗಳೂರು: ದಿತ್ವಾ ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಭಾನುವಾರವೂ ಥರಗುಟ್ಟಿಸುವ ಚಳಿ ಮುಂದುವರಿದಿತ್ತು.
ಬೆಂಗಳೂರು ನಗರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಕುಸಿತವಾಗಿ ಥಂಡಿ ವಾತಾವರಣ ನಿರ್ಮಾಣವಾಯಿತು.
ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಪ್ರದೇಶಗಳಲ್ಲಿ ಇಡೀ ದಿನ ಜಿಟಿಜಿಟಿ ಮಳೆಯಾಯಿತು. ಇನ್ನುಳಿದ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇತ್ತು. ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಬಾರದೆ ಮನೆಯಲ್ಲಿಯೇ ಕೆಲವರು ಕಾಲ ಕಳೆದರು.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಸೈಕ್ಲೋನ್, ಸೋಮವಾರ ಉತ್ತರ ತಮಿಳುನಾಡು, ಕರಾವಳಿ ಪುದುಚೇರಿಯತ್ತ ಸಾಗಲಿದೆ. ಇದರ ಪರಿಣಾಮದಿಂದ ತಮಿಳುನಾಡು, ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣದಲ್ಲಿ ಡಿ.2ರವರೆಗೆ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ. ದಕ್ಷಿಣ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಡಿ.7ರವರೆಗೆ ಮಳೆಯಾಗಲಿದೆ. ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಒಣಹವೆ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
ವಿಜಯಪುರ ಮತ್ತು ಧಾರವಾಡದಲ್ಲಿ ಭಾನುವಾರ 12.5 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಬೆಳಗಾವಿ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಧಾರವಾಡ, ಗಂಗಾವತಿ, ಹೊನ್ನಾವರ, ವಿಜಯಪುರ, ರಾಯಚೂರು, ಮಂಡ್ಯ ಮತ್ತು ಮೈಸೂರು ಸೇರಿ ರಾಜ್ಯದ ಹಲವು ಜಿಲ್ಲೆಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಹಲವು ಪ್ರದೇಶಗಳಲ್ಲಿ ಮುಂಜಾನೆ ಮೈಕೊರೆಯುವ ಚಳಿ, ಇಬ್ಬನಿ ಸುರಿದು ಮಂಜುಮಯ ವಾತಾವರಣ ಕಂಡುಬಂತು. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕರು ಬೆಚ್ಚನೆಯ ಉಡುಪು ಧರಿಸಿ ಹೊರಗೆ ಓಡಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net