ಬೆಂಗಳೂರಲ್ಲಿ ಚುಮು ಚುಮು ಚಳಿ-cold

ಚಳಿ
ಚಳಿ
Published on

ಪ್ರಮುಖ ಮುಖ್ಯಾಂಶಗಳು

  • ದಿತ್ವಾ ಸೈಕ್ಲೋನ್ ಪರಿಣಾಮ ರಾಜಧಾನಿಯಲ್ಲಿ ಚುಮು ಚುಮು ಚಳಿ
  • ಡಿ.7ವರೆಗೆ ಸಾಧಾರಣ ಮಳೆ
  • ಗರಿಷ್ಠ ತಾಪಮಾನದಲ್ಲಿ 5.6 ಡಿ.ಸೆ. ಕುಸಿತ
ಬೆಂಗಳೂರು:ದಿತ್ವಾ ಸೈಕ್ಲೋನ್ ಪರಿಣಾಮ ರಾಜಧಾನಿಯಲ್ಲಿ ಚುಮು ಚುಮು ಚಳಿ ಮುಂದುವರಿದಿದೆ.ನಗರದಲ್ಲಿ ಈಗಾಗಲೇ ಚಳಿ ಆವರಿಸಿದ್ದು,ಇದೀಗ ಸೈಕ್ಲೋನ್ ಕಾರಣದಿಂದ ದಿನದಿಂದ ದಿನಕ್ಕೆ ಇನ್ನಷ್ಟು ವಿಪರೀತ ಚಳಿ ಅನುಭವವಾಗುತ್ತಿದೆ.
ನಗರದಲ್ಲಿ ಭಾನುವಾರ ಗರಿಷ್ಠ ತಾಪಮಾನದಲ್ಲಿ 5.6 ಡಿ.ಸೆ. ಮತ್ತು ಕನಿಷ್ಠ ತಾಪಮಾನದಲ್ಲಿ 1.2 ಡಿ.ಸೆ. ಕುಸಿತವಾಗಿದೆ. ಹನುಮಂತನಗರ, ಬಸವನಗುಡಿ, ಜಯನಗರ ಮತ್ತು ಯಶವಂತಪುರ ಸೇರಿ ನಗರದ ಹಲವು ಬಡಾವಣೆಗಳಲ್ಲಿ ತುಂತುರು ಮಳೆಯಾಯಿತು.ಜೊತೆಗೆ, ಜೋರಾದ ಗಾಳಿ ಬೀಸುತ್ತಿತ್ತು. ಚಳಿಯಿಂದಾಗಿ ಮುಂಜಾನೆ ವಾಯುವಿಹಾರ ಮತ್ತು ವ್ಯಾಯಾಮಕ್ಕೆ ಹೋಗುವವರು ಸಂಖ್ಯೆ ಕಡಿಮೆಯಾಗಿತ್ತು. ಎಲ್ಲ ವಯೋಮಾನದವರು ಸ್ವೆಟರ್, ಮ್ಲರ್ ಸೇರಿ ಬೆಚ್ಚಗಿನ ಉಡುಪು ಧರಿಸಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
3 ದಿನದಿಂದ ಕನಿಷ್ಠ ತಾಪಮಾನವು 16 ಡಿ.ಸೆ.ಅಸುಪಾಸಿನಲ್ಲಿ ದಾಖಲಾಗುತ್ತಿದೆ. ನ.27ರಂದು ಕನಿಷ್ಠ ತಾಪಮಾನದಲ್ಲಿ 16.7 ಡಿ.ಸೆ., ನ.28ರಂದು 16.1 ಡಿ.ಸೆ. ವರದಿಯಾಗಿತ್ತು. 2022ರ ನ.25ರಂದು ಕನಿಷ್ಠ ತಾಪಮಾನದಲ್ಲಿ 15.4 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಇದು ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಿದೆ. 2023ರ ನ.24ರಂದು 17.1 ಡಿ.ಸೆ. ಉಷ್ಣಾಂಶ ಇತ್ತು. 1967ರ ನ.15ರಂದು ಕನಿಷ್ಠ ತಾಪಮಾನದಲ್ಲಿ 9.6 ಡಿ.ಸೆ. ಉಷ್ಣಾಂಶವೂ ವರದಿಯಾಗಿತ್ತು. ಇದು ಸರ್ವಕಾಲಿಕ ದಾಖಲೆಯ ಕನಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಡಿ.7ರವರೆಗೆ ಸಾಧಾರಣ ಮಳೆ:
ಸೈಕ್ಲೋನ್ ಪರಿಣಾಮದಿಂದ ರಾಜಧಾನಿ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಡಿ.9ರವರೆಗೆ ಸಾಧಾರಣ ಮಳೆಯಾಗಲಿದೆ. ಜೊತೆಗೆ ಥಂಡಿ ವಾತಾವರಣ ಮುಂದುವರಿಯಲಿದೆ. ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಮುಂಜಾನೆ ಮಂಜು ಬೀಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 22 ಡಿ.ಸೆ ಮತ್ತು 18 ಡಿ.ಸೆ. ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹೊಸ ಸೋಂಕು ಇರಲಿ ಎಚ್ಚರ:
ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಹಾಗಾಗಿ, ಜ್ವರ ಸೇರಿ ಹೊಸ ಸೋಂಕುಗಳ ಬಗ್ಗೆ ಜನರು ಎಚ್ಚರಿಕೆವಹಿಸುವಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.ಭಾರತದ ಬಹುಭಾಗ ಉಷ್ಣವಲಯ ಹವಾಮಾನ ಪ್ರದೇಶಗಳಿಂದ ಕೂಡಿರುವುದರಿಂದ ಅನೇಕ ರೋಗಗಳು ಜ್ವರದಿಂದಲೇ ಆರಂಭವಾಗಲಿದೆ. ಆರಂಭದ ಅವಧಿಯಲ್ಲೇ ರೋಗ ಲಕ್ಷಣವನ್ನು ಗುರುತಿಸುವುದು ವೈದ್ಯರಿಗೆ ಸವಾಲಿನ ಪ್ರಶ್ನೆಯಾಗಿದೆ. ಆದರೂ, ವೈದ್ಯರ ಶ್ರಮ ಉತ್ತಮವಾಗಿದೆ. ಇದನ್ನು ಆರ್ಥಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದೆ ಎಂದರು ಎಂದು ಭಾರತೀಯ ವೈದ್ಯ ಸಂಘಟನೆ (ಎಪಿಐ) ಅಧ್ಯಕ್ಷ ಪ್ರೊ.ಜ್ಯೋತಿರ್ಮಯ ಪಾಲ್ ಹೇಳಿದರು.
ಹೇಗೆ ಇರಬೇಕು?
ಮಳೆ ಮತ್ತು ಥಂಡಿ ವಾತಾವರಣದಿಂದ ನೆಗಡಿ, ಕೆಮ್ಮು, ಕಫ, ಜ್ವರ ಮುಂತಾದ ಸಮಸ್ಯೆಗಳು ಜಾಸ್ತಿ ಕಾಣಿಸುತ್ತದೆ. ಈಗಾಗಲೇ ಬೇರೆ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮೇಲೂ ಈ ಹವಾಮಾನ ಪರಿಣಾಮ ಬೀರುತ್ತದೆ. ಹೀಗಾಗಿ, ಪ್ರತಿದಿನ ಬೆಚ್ಚಗಿರಬೇಕು. ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ಕೊಡೆ ಅಥವಾ ರೈನ್‌ಕೋಟ್ ಬಳಸಲು, ಕುದಿಸಿ ಆರಿಸಿದ ನೀರನ್ನು ಮಾತ್ರ ಬಳಕೆ ಮಾಡಲು ವೈದರು ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಸೋಂಕಿನ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳಲು ಮತ್ತು ಸೀನುವಾಗ ಕರ್ಚೀಪ್ ಉಪಯೋಗಿಸಲು ವೈದ್ಯರು ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net