ಲೀಟರ್ ಲೆಕ್ಕದಲ್ಲಿ ಎಳನೀರು ಮಾರಾಟ: ಸಿಲಿಕಾನ್ ಸಿಟಿ ಅಂಗಡಿಯ ಬೋರ್ಡ್ ನೋಡಿ ಬೆಚ್ಚಿಬಿದ್ದ ನೆಟ್ಟಿಗರು! Coconut Water Price in Bengaluru

180 ರೂಪಾಯಿಗೆ ಒಂದು ಲೀಟರ್​ ಎಳನೀರ ಮಾರಾಟ
180 ರೂಪಾಯಿಗೆ ಒಂದು ಲೀಟರ್​ ಎಳನೀರ ಮಾರಾಟ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪ್ರಾರಂಭವಾದ ಬೇಸಿಗೆಕಾಲ
  • 180 ರೂಪಾಯಿಗೆ ಒಂದು ಲೀಟರ್​ ಎಳನೀರ ಮಾರಾಟ
  • ಟ್ವಿಟರ್​ನಲ್ಲಿ ಫೋಟೊ ಫುಲ್​ ವೈರಲ್​
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಅಲ್ಲಿ ಎಲ್ಲವೂ ಹೈಟೆಕ್, ಎಲ್ಲವೂ ಡಿಫರೆಂಟ್. ಇದೀಗ ಬೆಂಗಳೂರಿನ ರಸ್ತೆ ಬದಿಯ ಎಳನೀರು ಅಂಗಡಿಯೊಂದು ಇಡೀ ದೇಶದ ಗಮನ ಸೆಳೆದಿದೆ. ಸಾಮಾನ್ಯವಾಗಿ ನಾವು ಎಳನೀರನ್ನು ಒಂದಕ್ಕೆ ಇಂತಿಷ್ಟು ಎಂದು ಬೆಲೆ ನೀಡಿ ಕುಡಿಯುತ್ತೇವೆ. 
ಆದರೆ ಬೆಂಗಳೂರಿನ ಈ ಅಂಗಡಿಯಲ್ಲಿ ಎಳನೀರನ್ನು ಲೀಟರ್ (Coconut Water Price in Bengaluru) ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಷ್ಟಕ್ಕೂ ಒಂದು ಲೀಟರ್ ಎಳನೀರಿನ ಬೆಲೆ ಎಷ್ಟು ಗೊತ್ತಾ? ಅಪ್ಪಿ ತಪ್ಪಿ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ.

ವೈರಲ್ ಆದ ಆ ಒಂದು ಫೋಟೋ!

ರಿತು ಜೂನ್ ಎಂಬುವವರು ತಮ್ಮ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಫೋಟೋವೊಂದು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರಿನ ರಸ್ತೆ ಬದಿಯ ಸಣ್ಣ ಅಂಗಡಿಯೊಂದರ ಮುಂದೆ ದೊಡ್ಡ ಬೋರ್ಡ್‌ನಲ್ಲಿ 1 ಲೀಟರ್ ಎಳನೀರಿಗೆ 180 ರೂಪಾಯಿ ಎಂದು ಬರೆಯಲಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ಅವರು, "ನಾನು ಬೆಂಗಳೂರಿನಲ್ಲಿ ಮಾತ್ರ ಎಳನೀರನ್ನು ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇನೆ. ಇದೇ ಪೀಕ್ ಬೆಂಗಳೂರು (Peak Bengaluru) ಅಂದ್ರೆ! ಎಂದು ಅಡಿಟಿಪ್ಪಣಿ ನೀಡಿದ್ದಾರೆ.
ನೆಟ್ಟಿಗರ ನಡುವೆ ಬೆಲೆ ಸಮರ!
ಈ ಪೋಸ್ಟ್ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ಎಳನೀರಿನ ಬೆಲೆಯ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ. ಒಬ್ಬ ಬಳಕೆದಾರರು, 180 ರೂಪಾಯಿ ಅಂದ್ರೆ ತುಂಬಾ ಜಾಸ್ತಿ ಆಯ್ತು, ನಮ್ಮ ಊರಿನಲ್ಲಿ ಕೇವಲ 50 ರೂಪಾಯಿಗೆ ಒಂದು ಎಳನೀರು ಸಿಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು, ಬೆಂಗಳೂರಿನಲ್ಲಿ ಮಾತ್ರ ಇಂತಹ ವಿಚಿತ್ರ ಪ್ರಯೋಗಗಳು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಹೈದರಾಬಾದ್‌ನ ಕೆಲವರು, ನಮ್ಮಲ್ಲೂ ಲೀಟರ್ ಲೆಕ್ಕದಲ್ಲಿ ಎಳನೀರು ಸಿಗುತ್ತದೆ, ಇದು ಹೊಸದೇನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಲೀಟರ್ ಲೆಕ್ಕ ಹೇಗೆ ಮಾಡ್ತಾರೆ? ಇಲ್ಲಿದೆ ಉತ್ತರ!

ಎಳನೀರಿನ ಒಳಗಿರುವ ನೀರನ್ನು ಲೀಟರ್ ಲೆಕ್ಕದಲ್ಲಿ ಅಳೆಯುವುದು ಹೇಗೆ? ಎಂಬ ಕುತೂಹಲ ಹಲವರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಪೋಸ್ಟ್ ಮಾಡಿದ ರಿತು ಜೂನ್ ಅವರೇ ಉತ್ತರ ನೀಡಿದ್ದಾರೆ. ನೀವು ನಿಮ್ಮ ಸ್ವಂತ 1 ಲೀಟರ್ ಬಾಟಲಿಯನ್ನು ತೆಗೆದುಕೊಂಡು ಹೋದರೆ, ಅವರು ಎಳನೀರನ್ನು ಸುರಿದು ಬಾಟಲಿಯನ್ನು ತುಂಬಿಕೊಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಎಳನೀರಿನ ಗಾತ್ರ ಏನೇ ಇರಲಿ, ಗ್ರಾಹಕರಿಗೆ ಒಂದು ಲೀಟರ್ ನೀರು ಸಿಗುವುದು ಇಲ್ಲಿ ಗ್ಯಾರಂಟಿ.

ದುಬಾರಿ ಆದರೂ ಲಾಭವೇ?

ಸಾಮಾನ್ಯವಾಗಿ ಒಂದು ದೊಡ್ಡ ಎಳನೀರಿನಲ್ಲಿ 300 ರಿಂದ 500 ಮಿಲಿ ನೀರು ಇರುತ್ತದೆ. ಒಂದು ಲೀಟರ್ ತುಂಬಲು ಕನಿಷ್ಠ 2 ರಿಂದ 3 ಎಳನೀರುಗಳು ಬೇಕಾಗುತ್ತವೆ. ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಎಳನೀರಿನ ಬೆಲೆ 50 ರಿಂದ 70 ರೂಪಾಯಿವರೆಗೆ ಇದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ 180 ರೂಪಾಯಿ ದುಬಾರಿ ಎನಿಸಿದರೂ, ಹೆಚ್ಚು ನೀರಿರುವ ಎಳನೀರಿಗಾಗಿ ಹುಡುಕಾಡುವ ಬದಲು ನೇರವಾಗಿ ಲೀಟರ್ ಲೆಕ್ಕದಲ್ಲಿ ಪಡೆಯುವುದು ಕೆಲವರಿಗೆ ಅನುಕೂಲಕರ ಎನಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net