ಮೂಲೆಗೆ ಬಿಸಾಡುತ್ತಿದ್ದ ತೆಂಗಿನ ಚಿಪ್ಪಿಗೂ ಬಂತು ಪರ್ವಕಾಲ; ಬೇಡಿಕೆ ಹೆಚ್ಚಾಗಿದ್ಯಾಕೆ, ಎಲ್ಲಿ ಮಾರಾಟ ಮಾಡಬಹುದು?..Coconut Shell Business

Coconut Shell Business
Coconut Shell Business
Published on

ಪ್ರಮುಖ ಮುಖ್ಯಾಂಶಗಳು

  • ಬಳಕೆ ಮಾಡಿ ಕಸಕ್ಕೆ ಬಿಸಾಡಲಾಗುತ್ತಿದ್ದ ತೆಂಗಿನ ಚಿಪ್ಪಿಗೆ ಬಂತು ಬಂಗಾರದ ಬೆಲೆ
  • ಇದ್ದಿಲು, ಸೌಂದರ್ಯವರ್ಧಕ ಮತ್ತು ಕರಕುಶಲಕ್ಕಾಗಿ ಬಳಕೆ
  • ವಿದೇಶಕ್ಕೆ ರಫ್ತಾಗುತ್ತಿದೆ ದಕ್ಷಿಣ ಭಾರತದಲ್ಲಿ ಬಳಕೆ ಮಾಡಲಾಗುತ್ತಿರುವ ಚಿಪ್ಪುಗಳು
Coconut Shell Business
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ,ಸುಟ್ಟರೆ ನೊಸಲಿಗೆ ವಿಭೂತಿಯಾದೆ,ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ..ಎಂದು ಕವಿ ಎಸ್.ಜಿ.ನರಸಿಂಹಾಚಾರ್ಯ ಹಸುವಿನ ಸಗಣಿ ಬಗ್ಗೆ ಬರೆಯುತ್ತಾರೆ. ಈಗ ಈ ಪದ್ಯವು ತೆಂಗಿನ ಚಿಪ್ಪಿನ ವಿಚಾರಕ್ಕೆ ನೆನಪಾಗುತ್ತಿದೆ. ಏಕೆಂದರೆ,
ಅನಾದಿ ಕಾಲದಿಂದಲೂ ಕಲ್ಪವೃಕ್ಷ ಎಂತಲೇ ಕರೆಸಿಕೊಳ್ಳುವ ತೆಂಗು. ಇಂದಿನವರೆಗೂ ಅದರ ನಾರು,  ನೀರು, ಕಾಯಿ, ಗರಿ, ಕಾಂಡ, ಹೊಂಬಾಳೆ ಎಲ್ಲವೂ  ಮನುಷ್ಯನ ಅಗತ್ಯಕ್ಕೆ ಬಳಕೆಯಾಗುತ್ತದೆ.
 ಆದರೆ, ಈ ಹಿಂದೆ ನಮ್ಮ ಪೂರ್ವಜರು ಮತ್ತು ಇಂದಿನ ಪೀಳಿಗೆಯವರು ತೆಂಗಿನ ಕಾಯಿ ಬಳಕೆ ಮಾಡಿಕೊಂಡು ಚಿಪ್ಪನ್ನು ಬೇಕಾದ ವಿಚಾರಕ್ಕೆ ಬಳಕೆ ಮಾಡಿಕೊಂಡು ಬಿಸಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಬೇಡ ಎಂದು ಕಸಕ್ಕೋ ಅಥವಾ ಒಲೆಯಲ್ಲಿ ನೀರು ಕಾಯಿಸಲೋ, ರಂಗೋಲಿ ಪುಡಿಗಳನ್ನು ಶೇಖರಣೆ ಮಾಡಿಕೊಳ್ಳಲೋ ಬಳಕೆ ಮಾಡುತ್ತಿದ್ದ ಚಿಪ್ಪಿಗೆ ಈಗ ಭಾರಿ ಡಿಮ್ಯಾಂಡ್​ ಇದೆ. ಹೌದು, ಈಗ ಮನೆ ಮನೆಗೂ ಚಿಪ್ಪು ಖರೀದಿ ಮಾಡುವವರು ಬರುತ್ತಿದ್ದಾರೆ. 

ಚಿಪ್ಪುಗಳು ಈಗ ಮಹಿಳೆಯರ ಮತ್ತೊಂದು ಆದಾಯವಾಗಿ ಬದಲಾಗಿದೆ. ಬೇಡವೆಂದು ಬಿಸಾಡುತ್ತಿದ್ದ ಚಿಪ್ಪಿಗೆ ಏಕಾಏಕಿ ಇಷ್ಟೊಂದು ಬೇಡಿಕೆ ಹೆಚ್ಚಾಗಲು ಕಾರಣವೇನು, ಚಿಪ್ಪು ವಿದೇಶಕ್ಕೆ ಮಾರಾಟ ಮಾಡುತ್ತಿರುವುದಾದರೂ ಯಾಕೆ? ನೀವು ಚಿಪ್ಪನ್ನು ಎಲ್ಲಿ ಮಾರಾಟ ಮಾಡಬಹುದು ಅನ್ನೋದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಚಿಪ್ಪಿಗೆ ಸಿಗುತ್ತಿರುವ ಹಣವೆಷ್ಟು?

ಒಂದು ಕೆಜಿ ತೆಂಗಿನ ಚಿಪ್ಪನ್ನು ಖರೀದಿದಾರರಿಗೆ ಕೊಟ್ಟರೆ 30ರಿಂದ 60 ರೂಪಾಯಿಯನ್ನು ಗಳಿಸಬಹುದಾಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸೇರಿದಂತೆ ಹಲವು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಅದರ ಮೇರೆಗೆ ನಾರಿ ಮಣಿಯರು ಈ ಹಿಂದೆ ಬಳಸಿ ಬಿಸಾಡಲಾಗುತ್ತಿದ್ದ ಚಿಪ್ಪನ್ನು ಮಾರಾಟಕ್ಕೆ ಶೇಖರಣೆ ಮಾಡಲಾಗುತ್ತಿದೆ.


ಕರ್ನಾಟಕದ ಕರಾವಳಿ ಪ್ರದೇಶವಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ  ತೆಂಗಿನ ಕಾಯಿ ಬಳಕೆ ಮಾಡೋದು ಹೆಚ್ಚು. ಜೊತೆಗೆ ಕೇರಳ ರಾಜ್ಯದ ಜನರಿಗಂತೂ ಪ್ರತಿ ಅಡುಗೆಯಲ್ಲಿ ತೆಂಗಿನ ಕಾಯಿ ಇರಲೇ ಬೇಕು. ಈ ಹಿನ್ನೆಲೆ ನಿತ್ಯವೂ ತೆಂಗಿನ ಚಿಪ್ಪು ಒಲೆ ಸೇರುವುದು ಅಥವಾ ಕಸಕ್ಕೆ ಸೇರೋದು ಸಾಮಾನ್ಯ. ಆದರೆ, ಈಗ ಇದಕ್ಕೆ ಬಂಗಾರದ ಬೆಲೆ ಬಂದಿದೆ. 

ಕರಕುಶಲ ಮತ್ತು ಇದ್ದಿಲಾಗುತ್ತಿರುವ ಚಿಪ್ಪು

ಇಂದಿನ ದಿನಗಳಲ್ಲಿ ಚಿಪ್ಪಿನಿಂದ ನಾನಾ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಚಿಪ್ಪಿನ  ಮೇಲ್ಮೆ ಪದರವನ್ನು ಚೆನ್ನಾಗಿ ಉಜ್ಜಿ ಅದನ್ನು ನುಣ್ಣನೆ ಕಾಣುವಂತೆ ಮಾಡಿ ಅದರಲ್ಲಿ ಅಡುಗೆ ಮನೆಗೆ ಬೇಕಾಗುವ ಸೌಟು, ಉಪ್ಪಿನ ಡಬ್ಬವಾಗಿ ಮಾಡಿದರೆ, ಇನ್ನೂ ಕೆಲವರು ಅದರಿಂದ ಸರ, ಓಲೆಯಂತೆ ಆಭರಣಗಳನ್ನು ತಯಾರಿ ಮಾಡುತ್ತಿದ್ದಾರೆ. ಕ್ಯಾಂಡಲ್​ ತಯಾರಿ, ಬುದ್ದ, ಅಂಬೇಡ್ಕರ್, ಗಾಂಧೀಜಿ, ನೆಹರು​​ ಸೇರಿದಂತೆ ಮಹಾನ್​ ವ್ಯಕ್ತಿಗಳ ಚಿತ್ರಣವನ್ನು ರೂಪಿಸಿ ಹಣ ಮಾಡಿಕೊಳ್ಳುತ್ತಾರೆ.

ವಿದೇಶಕ್ಕೂ ರಫ್ತಾಗುತ್ತಿದೆ ಚಿಪ್ಪು

ಇಂದು ಚಿಪ್ಪುಗಳಿಗೆ ಪ್ರಮುಖ ಬೇಡಿಕೆ ಇದ್ದಿಲು ಉತ್ಪಾದನೆಯಿಂದ ಬಂದಿದೆ. ತೆಂಗಿನ ಚಿಪ್ಪಿನಲ್ಲಿ  ಉತ್ತಮ ಗುಣಮಟ್ಟದ ಕಾರ್ಬನ್ ಶೇ.95ರಷ್ಟು ಇರುವ ಕಾರಣ ಟನ್​​ಗೆ 30 ಸಾವಿರಕ್ಕೂ ಹೆಚ್ಚು ದರ ಕೊಟ್ಟು ಇದನ್ನು ಕೊಂಡುಕೊಳ್ಳಲಾಗುತ್ತಿದೆ. ತೆಂಗಿನ ಚಿಪ್ಪಿನಿಂದ ತಯಾರಿಸಿದ ಇದ್ದಿಲನ್ನು ನೀರು ಶುದ್ಧೀಕರಣ ಘಟಕಗಳು, ಹೋಟೆಲ್ ಬಾರ್ಬೆಕ್ಯೂಗಳು ಮತ್ತು ಗ್ರಿಲ್‌ಗಳು, ವಿದ್ಯುತ್ ಗ್ರಿಡ್‌ಗಳು ಮತ್ತು ಇತರ ಹಲವಾರು ಕೈಗಾರಿಕೆಗಳು ಬಳಕೆ ಮಾಡಿಕೊಳ್ಳುತ್ತಿವೆ. ಮುಖ್ಯವಾಗಿ ಆಫ್ರಿಕನ್ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಸೌಂದರ್ಯ ವರ್ದಕ ವಸ್ತು ತಯಾರಿ ಮಾಡಲು ಬಳಕೆ ಮಾಡಲಾಗುತ್ತಿದೆ.  ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ  ಮಾಡುವ ನಿರ್ದಶನವಿದೆ.

ತೆಂಗಿನ ಚಿಪ್ಪು ಎಲ್ಲಿ ಮಾರಾಟ ಮಾಡಬಹುದು

ತೆಂಗಿನ ಚಿಪ್ಪನ್ನು ನಿಮ್ಮ ಸ್ಥಳೀಯ ಪ್ರದೇಶದಲ್ಲಿರುವ ಸಗಟು ವ್ಯಾಪಾರಿಗಳಿಗೆ ಅಂದರೆ ತೆಂಗಿನ ಮಂಡಿ ಇರುವ ವ್ಯಾಪರಿಗಳಿಗೆ ಬಲ್ಕ್​ ರೂಪದಲ್ಲಿ ಮಾರಾಟ ಮಾಡಬಹುದು. ಕಾರ್ಬನ್​ ಕಾರ್ಖಾನೆಗಳು. ತೆಂಗಿನ ಚಿಪ್ಪಿನಿಂದ ಇಂಗಾಲವನ್ನು ತಯಾರಿಸಯವ ಕಾರ್ಖಾನೆಗಳು ಇವನ್ನು ಪಡೆದುಕೊಳ್ಳುತ್ತವೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿರುವ ಇಂಡಸ್ಟ್ರಿಗಳುಗೆ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್​ ಸಹ ಪಡೆದುಕೊಳ್ಳುತ್ತಿದೆ. ಕರಕುಶಲಕಾರರಿಗೆ, ಹೋಟೆಲ್ ರೆಸ್ಟೋರೆಂಟ್​ಗಳ ಬಳಿ ಸಂವಹನ ಮಾಡಿಕೊಂಡು ಹಣ ಗಳಿಕೆ ಮಾಡಬಹುದಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net