ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯನಿರ್ವಹಿಸಲಿ: ಸಿಎಂ ಸಿದ್ದರಾಮಯ್ಯ ಸಲಹೆ -CM Siddaramaiah

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Published on
ಬೆಂಗಳೂರು: ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು. ಎಲ್ಲ ಕ್ಷೇತ್ರಗಳು ಸಹಕಾರ ಕ್ಷೇತ್ರಕ್ಕೆ ಬರವಂತಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆಲಿ ಅಸ್ಕರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಹಕಾರ ಸಂಘಗಳ ನಿಬಂಧಕರ ಆಡಳಿತ ಕಚೇರಿಯ ‘ಸಹಕಾರ ಸಮೃದ್ಧಿ ಸೌಧ’ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ’ ಎಂಬ ಸಹಕಾರಿ ತತ್ವದಡಿ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಶೇ.60 ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿದೆ.ಯಾವ ಕ್ಷೇತ್ರವೂ ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ. ನೆಹರೂ ಅವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಶಾಲೆ,ಪಂಚಾಯತಿ ಮತ್ತು ಸಹಕಾರ ಸಂಘ ಇರಲೇಬೇಕು. ಆಗ ಮಾತ್ರ ಆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದಿದ್ದರು. ಪ್ರಸ್ತುತ ಹಾಲಿನ ಸೊಸೈಟಿಗಳಾದ ನಂತರ ಪ್ರತಿ ಊರಿನಲ್ಲಿ ಇದು ಸಾಧ್ಯವಾಗಿದೆ ಎಂದರು.
ಸಹಕಾರ ಸೌಧದಲ್ಲಿ ಸೇವೆ ಉತ್ತಮವಾಗಿರಬೇಕು. ಸಹಕಾರ ಸಮೃದ್ಧಿ ಸೌಧವನ್ನು ಸಂತಸದಿಂದ ಲೋಕಾರ್ಪಣೆ ಮಾಡಿದ್ದೇವೆ. ಇದಕ್ಕೆ ನಾನೇ ಭೂಮಿ ಪೂಜೆ ಮಾಡಿದ್ದೆ. ಇದೀಗ ಇಲಾಖೆಯ ಸಚಿವನಾಗಿ ಉದ್ಘಾಟಿಸಿದ್ದೇನೆ. ನಾನು ಯಾವತ್ತೂ ಸಹಕಾರಿ ಇಲ್ಲ. ನಾನು ಸಹಕಾರಿ ಕ್ಷೇತ್ರದಲ್ಲಿ ಇಲ್ಲ. ಇನ್ನೂ ಮುಂದೆ ಆಗಬಹುದು. ನಮ್ಮ ಸರ್ಕಾರದಿಂದ ಇಲಾಖೆಗೆ ಎಲ್ಲ ಬೆಂಬಲ ನೀಡುತ್ತೇನೆ. ಇಲಾಖೆಗೆ ಉನ್ನತಿಯಾಗಬೇಕು. ನಾನು ಪಶುಸಂಗೋಪನೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳನ್ನು ಹಾಲು ಡೈರಿಯೊಂದಿಗೆ ಸೇರ್ಪಡೆ ಮಾಡಲಾಯಿತು. ಹೀಗಾಗಿ, ವೇಗವಾಗಿ ಹಾಲಿನ ಉತ್ಪಾದನೆಗೆ ಸಾಧ್ಯವಾಯಿತು ಎಂದು ಸಿಎಂ ಹೇಳಿದರು.
ಸಚಿವ ಎಚ್.ಕೆ.ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿ ಬಿಲ್ಕಿಸ್ ಬಾನು ಮತ್ತಿತರರಿದ್ದರು.
ಯಶ್ವಸಿನಿ ಯೋಜನೆ ಬಲವರ್ಧನೆಗೊಳಿಸಿ: ಡಿಸಿಎಂ ಸಲಹೆ
ಯಶ್ವಸಿನಿ ಯೋಜನೆಯ ಬಲವರ್ಧನೆಗೆ ಕೆಲವೊಂದು ಮಾರ್ಪಾಡು ಮಾಡುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಇದು ಒಳ್ಳೆಯ ಯೋಜನೆಯಾಗಿದ್ದು, ಲಾನುಭವಿಗಳಿಗೆ ಇನ್ನಷ್ಟು ಹೆಚ್ಚಿನ ಪರಿಣಾಮಯಾಗಿ ಸೌಲಭ್ಯ ಸಿಗುವಂತಾಗಬೇಕು ಎಂದು ಡಿಸಿಎಂ ಡಿಕೆಶಿ ಸಲಹೆ ನೀಡಿದರು. ಸಹಕಾರ ಕ್ಷೇತ್ರ ಎಂಬುದು ಯುವ ನಾಯಕರನ್ನು ಬೆಳೆಸುವ ಕ್ಷೇತ್ರವಾಗಿದೆ. ರಾಷ್ಟ್ರದ ರಾಜಕಾರಣ ಮಟ್ಟಕ್ಕೆ ಕೆಲವರು ಬೆಳೆದಿದ್ದಾರೆ. ಡಿಸಿಸಿ ಬ್ಯಾಂಕ್‌ಗಳ ಸಹಕಾರದಿಂದಲೇ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಉಳಿದಿವೆ. ಇದು ರೈತರಿಗೆ ಲಾಭವಾಗಿದೆ. ಸಹಕಾರ ಬ್ಯಾಂಕಿನಲ್ಲಿ ಕೆಲವರು ಬೇರೆಯವ ಹೆಸರಿನಲ್ಲಿ ಸಾಲ ಪಡೆದು ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಸಾಲ ಸೌಲಭ್ಯ ನೇರವಾಗಿ ರೈತರಿಗೆ ತಲುಪಬೇಕು. ಸಹಕಾರ ಕ್ಷೇತ್ರ ನಂಬಿಕೆ ಮೇಲೆ ನಡೆಯುತ್ತದೆ. ಠೇವಣಿದಾರರಿಗೆ ಮೋಸ ಮಾಡುವ ಬ್ಯಾಂಕ್‌ಗಳ ಬಗ್ಗೆ ಎಚ್ಚರವಹಿಸಬೇಕು. ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು ಎಂದಿ ಡಿಸಿಎಂ ಹೇಳಿದರು.
ಹಾಲಿನ ಸೊಸೈಟಿಗಳು ಬಂದ ನಂತರ ರೈತರ ಪರಿಸ್ಥಿತಿ ಉತ್ತಮವಾಗಿದೆ.ಪ್ರತಿನಿತ್ಯ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಳೆಯ ಮೈಸೂರು ಭಾಗದಲ್ಲಿ ಹೆಚ್ಚು ಹಾಲ ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು. ಸಹಕಾರ ಕ್ಷೇತ್ರದಿಂದ ಇದು ಲಾಭದಾಯಕ ಉಪಕಸುಬು ಆಗಿದೆ.
- ಸಿದ್ದರಾಮಯ್ಯ ಸಿಎಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net