ಇಂದು ಮಧ್ಯಾಹ್ನ 3 ಗಂಟೆಗೆ CM ಸಿದ್ದರಾಮಯ್ಯ ರಾಜೀನಾಮೆ! ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ?

CM
CM
Published on
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ ಹಾಗೂ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಾಯಕತ್ವ(CM) ಬದಲಾವಣೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ 3ಕ್ಕೆ ರಾಜೀನಾಮೆ ಮುಹೂರ್ತ ಫಿಕ್ಸ್!
ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಹಮ್ಮಿಕೊಂಡಿದ್ದ ಸಚಿವರ ಹೈ-ವೋಲ್ಟೇಜ್ ಉಪಾಹಾರ ಕೂಟದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಇಂದು ಮಧ್ಯಾಹ್ನ 3 ಗಂಟೆಗೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದೇನೆ," ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ನಾಯಕತ್ವದ ಪಟ್ಟಾಭಿಷೇಕಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ರಾಜ್ಯಪಾಲರಿಲ್ಲದಿದ್ದರೆ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರು ಪತ್ನಿಯ ಅನಾರೋಗ್ಯ ಹಾಗೂ ತುರ್ತು ಕಾರ್ಯದ ನಿಮಿತ್ತ ದಿಢೀರ್ ಮುಂಬೈ ಪ್ರವಾಸ ಕೈಗೊಂಡಿರುವುದರಿಂದ ರಾಜೀನಾಮೆ ಸಲ್ಲಿಕೆ ವಿಳಂಬವಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಇದಕ್ಕೆ ತೆರೆ ಎಳೆದಿರುವ ಸಿದ್ದರಾಮಯ್ಯ, "ನಾನು ಮಧ್ಯಾಹ್ನ ಲೋಕಭವನಕ್ಕೆ (ರಾಜ್‌ಭವನ) ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಅಧಿಕೃತ ಕಾರ್ಯದರ್ಶಿಗೆ (Governor's Secretary) ನನ್ನ ರಾಜೀನಾಮೆ ಪತ್ರವನ್ನು ಹಸ್ತಾಂತರಿಸುತ್ತೇನೆ," ಎಂದು ಹೇಳಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
'ಕಾವೇರಿ' ನಿವಾಸದಲ್ಲಿ ನಡೆದ ಈ ಅಂತಿಮ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೈಕಮಾಂಡ್ ತೀರ್ಮಾನ ಹಾಗೂ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net