ಇದನ್ನೆಲ್ಲ ಬೇಕಂತಲೇ ಮಾಡಿದ್ದಾರೆ... ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ! CM Siddaramaiah

ಇದನ್ನೆಲ್ಲ ಬೇಕಂತಲೇ ಮಾಡಿದ್ದಾರೆ... ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ! CM Siddaramaiah
ಇದನ್ನೆಲ್ಲ ಬೇಕಂತಲೇ ಮಾಡಿದ್ದಾರೆ... ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ! CM Siddaramaiah
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ
  • ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಸಮಾಧಾನ
  • ರಾಜ್ಯಪಾಲರ ಸೆಕ್ರೆಟರಿಗೆ ರಾಜೀನಾಮೆ ಪತ್ರವನ್ನು ಕೊಟ್ಟು ಬರುತ್ತೇನೆಂದ ಸಿಎಂ ಸಿದ್ದರಾಮಯ್ಯ
  • ರಾಜ್ಯಪಾಲರ ದಿಢೀರ್ ಅನುಪಸ್ಥಿತಿಯ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಧಿಕೃತವಾಗಿ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಅನುಪಸ್ಥಿತಿ ಕಂಡುಬಂದಿದ್ದು, ಇದು ಸಿಎಂ ಸಿದ್ದರಾಮಯ್ಯ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಸದ್ಯ ರಾಜಭವನದಲ್ಲಿ ಲಭ್ಯವಿಲ್ಲದ ಕಾರಣ, ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿಗಳು, ಸದ್ಯಕ್ಕೆ ರಾಜ್ಯಪಾಲರು ಇಲ್ಲಿಲ್ಲ, ಹಾಗಾಗಿ ಅವರ ಸೆಕ್ರೆಟರಿಗೆ (ಕಾರ್ಯದರ್ಶಿ) ಹೋಗಿ ರಾಜೀನಾಮೆ ಪತ್ರವನ್ನು ಕೊಟ್ಟು ಬರುತ್ತೇನೆ. ಆ ಬಳಿಕ ರಾಜ್ಯಪಾಲರು ಮರಳಿ ಬಂದ ತಕ್ಷಣ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಾಂವಿಧಾನಿಕ ಪ್ರಕ್ರಿಯೆಯ ಪ್ರಕಾರ ರಾಜೀನಾಮೆ ನೀಡಲು ಮುಂದಾದರೂ ತಾಂತ್ರಿಕ ಅಡಚಣೆ ಎದುರಾಗಿರುವುದಕ್ಕೆ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
ಇದೇ ವೇಳೆ ರಾಜ್ಯಪಾಲರ ದಿಢೀರ್ ಅನುಪಸ್ಥಿತಿಯ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಸಿಎಂ ನೇರ ಆರೋಪ ಮಾಡಿದ್ದಾರೆ. ಇದನ್ನೆಲ್ಲ ಬೇಕಂತಲೇ ಮಾಡುತ್ತಿದ್ದಾರೆ, ಇದೆಲ್ಲಾ ಕೇವಲ ಕುತಂತ್ರ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಗೊಂದಲ ಸೃಷ್ಟಿಯಾಗಲಿ ಎಂಬ ಏಕೈಕ ಉದ್ದೇಶದಿಂದಲೇ ನಾನು ರಾಜೀನಾಮೆ ನೀಡುವ ಸಮಯದಲ್ಲಿ ರಾಜ್ಯಪಾಲರು ಇಲ್ಲದಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ರಾಜಭವನದ ವಿರುದ್ಧ ಗುಡುಗಿದ್ದಾರೆ.
ಇಷ್ಟಕ್ಕೆ ನಿಲ್ಲದ ಮುಖ್ಯಮಂತ್ರಿಗಳು, ಈ ಇಡೀ ಬೆಳವಣಿಗೆಯ ಹಿಂದೆ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖುದ್ದು ರಾಜ್ಯಪಾಲರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, "ಅಮಿತ್ ಷಾ ಅವರೇ ಫೋನ್ ಮಾಡಿ, ಮೂರು ದಿನಗಳ ಕಾಲ ಬೆಂಗಳೂರಿನಿಂದ ಹೊರಗೆ ಬಂದುಬಿಡಿ ಎಂದು ರಾಜ್ಯಪಾಲರಿಗೆ ಸೂಚಿಸಿದ್ದಾರೆ. ಅದೇ ಕಾರಣಕ್ಕೆ ರಾಜ್ಯಪಾಲರು ಬೇಕಂತಲೇ ಇಲ್ಲಿಂದ ಹೋಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಅವರ ಈ ನಡೆ ಮತ್ತು ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ತಾವಾಗಿಯೇ ರಾಜೀನಾಮೆ ನೀಡಲು ಸಿದ್ಧರಿದ್ದರೂ, ಕೇಂದ್ರದ ನಾಯಕರ ಆಗ್ರಹದ ಮೇರೆಗೆ ರಾಜ್ಯಪಾಲರು ರಾಜಭವನದಿಂದ ದೂರ ಉಳಿದು ಗೊಂದಲ ಮೂಡಿಸುತ್ತಿದ್ದಾರೆ ಎಂಬ ಸಿಎಂ ಆರೋಪಕ್ಕೆ ಪ್ರತಿಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತವೆ ಮತ್ತು ಸೆಕ್ರೆಟರಿಗೆ ರಾಜೀನಾಮೆ ನೀಡಿದ ನಂತರದ ಮುಂದಿನ ಕಾನೂನಾತ್ಮಕ ಬೆಳವಣಿಗೆಗಳು ಏನಾಗಲಿವೆ ಎಂಬುದನ್ನು ಇಡೀ ನಾಡು ಕುತೂಹಲದಿಂದ ಗಮನಿಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net