ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಭಾವುಕರಾಗಿ ಕಣ್ಣೀರು ಸುರಿಸಿದ ಸಚಿವ ಸಂತೋಷ್ ಲಾಡ್! CM Siddaramaiah

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಭಾವುಕರಾಗಿ ಕಣ್ಣೀರು ಸುರಿಸಿದ ಸಚಿವ ಸಂತೋಷ್ ಲಾಡ್! CM Siddaramaiah
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಭಾವುಕರಾಗಿ ಕಣ್ಣೀರು ಸುರಿಸಿದ ಸಚಿವ ಸಂತೋಷ್ ಲಾಡ್! CM Siddaramaiah
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಬದಲಾವಣೆಯ ಪರ್ವ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಭಾವುಕ ಸನ್ನಿವೇಶಗಳು ಮುನ್ನೆಲೆಗೆ
  • ಉಪಾಹಾರ ಕೂಟದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ
  • ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಸಚಿವ ಸಂತೋಷ್ ಲಾಡ್
  • ನಾಯಕತ್ವ ಬದಲಾವಣೆಯ ಕ್ಷಣವನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರಿಟ್ಟ ಸಿದ್ದರಾಮಯ್ಯ ಸಂತೋಷ್ ಲಾಡ್
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪರ್ವ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಭಾವುಕ ಸನ್ನಿವೇಶಗಳು ಮುನ್ನೆಲೆಗೆ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಅವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನಡೆದ ಹೈ-ವೋಲ್ಟೇಜ್ ಉಪಾಹಾರ ಕೂಟದ ಬಳಿಕ, ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಅವರು ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಂತೋಷ್ ಲಾಡ್, ನಾಯಕತ್ವ ಬದಲಾವಣೆಯ ಈ ಕ್ಷಣವನ್ನು ಅರಗಿಸಿಕೊಳ್ಳಲಾಗದೆ ಸಭೆಯ ಮುಕ್ತಾಯದ ಬಳಿಕ ಕಣ್ಣಾಲಿಗಳನ್ನು ತುಂಬಿಕೊಂಡರು. ಸಿಎಂ ರಾಜೀನಾಮೆ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದಾಗ ಏನೂ ಮಾತನಾಡಲಾಗದೇ ತುಂಬಾ ಭಾವುಕರಾಗಿ ಸಂತೋಷ್​ ಲಾಡ್​ ಕಣ್ಣೀರಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ, ಹಿಂದುಳಿದ ವರ್ಗಗಳ ಪರವಾಗಿ ಅವರ ಹೋರಾಟ ಮತ್ತು ಪಕ್ಷವನ್ನು ಮುನ್ನಡೆಸಿದ ರೀತಿಗೆ ಸಚಿವರು ಹಾಗೂ ಶಾಸಕರಲ್ಲಿ ಅಪಾರ ಗೌರವವಿದೆ. ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿ, ಅಧಿಕಾರ ಹಸ್ತಾಂತರದ ಸುಳಿವು ನೀಡಿದಾಗ ಇಡೀ ಸಭಾಂಗಣದಲ್ಲಿ ಕೆಲಕಾಲ ಮೌನ ಆವರಿಸಿತ್ತು. ಈ ವೇಳೆ ತಮ್ಮ ನೆಚ್ಚಿನ ನಾಯಕ ಹುದ್ದೆಯಿಂದ ಕೆಳಗಿಳಿಯುತ್ತಿರುವುದನ್ನು ಕಂಡು ಸಚಿವ ಸಂತೋಷ್ ಲಾಡ್ ಭಾವುಕರಾದರು. ಅವರನ್ನು ಸಮಾಧಾನಪಡಿಸಲು ಇತರ ಸಚಿವರು ಯತ್ನಿಸಿದರಾದರೂ, ಸಿಎಂ ಮೇಲಿನ ಅಭಿಮಾನ ಅವರ ಕಣ್ಣೀರಿನ ರೂಪದಲ್ಲಿ ಹೊರಬಂತು.
ರಾಜಕೀಯದಲ್ಲಿ ಅಧಿಕಾರ ಬದಲಾವಣೆಗಳು ಸಹಜವಾಗಿದ್ದರೂ, ಸಿದ್ದರಾಮಯ್ಯ ಮತ್ತು ಸಂತೋಷ್ ಲಾಡ್ ನಡುವಿನ ಒಡನಾಟ ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರ ಗಟ್ಟಿ ನಾಯಕತ್ವದ ನೆರಳಿನಲ್ಲಿ ಕೆಲಸ ಮಾಡಿದ ಸಚಿವರಿಗೆ ಈ ವಿದಾಯದ ಕ್ಷಣ ತೀವ್ರ ಆಘಾತವನ್ನುಂಟು ಮಾಡಿದೆ. ಪ್ರಸ್ತುತ ಈ ಭಾವುಕ ಕ್ಷಣದ ಸುದ್ದಿಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಅವರ ಮೇಲಿಟ್ಟಿರುವ ಅಪ್ರತಿಮ ಪ್ರೀತಿ-ವಿಶ್ವಾಸಕ್ಕೆ ಕೈಗನ್ನಡಿಯಾಗಿದೆ.

ಇಂದು ಮಧ್ಯಾಹ್ನ ರಾಜೀನಾಮೆ

ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಹಮ್ಮಿಕೊಂಡಿದ್ದ ಸಚಿವರ ಹೈ-ವೋಲ್ಟೇಜ್ ಉಪಾಹಾರ ಕೂಟದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಇಂದು ಮಧ್ಯಾಹ್ನ 3 ಗಂಟೆಗೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದೇನೆ," ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ನಾಯಕತ್ವದ ಪಟ್ಟಾಭಿಷೇಕಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್​ ಅವರು ಪತ್ನಿಯ ಅನಾರೋಗ್ಯ ಹಾಗೂ ತುರ್ತು ಕಾರ್ಯದ ನಿಮಿತ್ತ ದಿಢೀರ್ ಮುಂಬೈ ಪ್ರವಾಸ ಕೈಗೊಂಡಿರುವುದರಿಂದ ರಾಜೀನಾಮೆ ಸಲ್ಲಿಕೆ ವಿಳಂಬವಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಇದಕ್ಕೆ ತೆರೆ ಎಳೆದಿರುವ ಸಿದ್ದರಾಮಯ್ಯ, "ನಾನು ಮಧ್ಯಾಹ್ನ ರಾಜ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಅಧಿಕೃತ ಕಾರ್ಯದರ್ಶಿಗೆ ನನ್ನ ರಾಜೀನಾಮೆ ಪತ್ರವನ್ನು ಹಸ್ತಾಂತರಿಸುತ್ತೇನೆ ಎಂದು ಹೇಳಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

ಮುಂದಿನ ಸಿಎಂ ಡಿಕೆಶಿ

'ಕಾವೇರಿ' ನಿವಾಸದಲ್ಲಿ ನಡೆದ ಈ ಅಂತಿಮ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೈಕಮಾಂಡ್ ತೀರ್ಮಾನ ಹಾಗೂ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಅಧಿಕಾರ‘ ಹಂಚಿಕೆ ಸೂತ್ರದಡಿ ಕಾಂಗ್ರೆಸ್​ ಹೈಕಮಾಂಡ್​ ನಾಯಕತ್ವ ಬದಲಾವಣೆ ಮಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net