ಸಿಎಂ ಕುರ್ಚಿ ಕದನದ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ! CM Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಯಾದ ಸಿಎಂ ಸಿದ್ದರಾಮಯ್ಯ
  • ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆಯ ಮಧ್ಯೆದಲ್ಲೇ ಕುತೂಹಲ ಮೂಡಿಸಿದ ಭೇಟಿ
  • ಪ್ರಸ್ತುತ ಕಾಂಗ್ರೆಸ್​ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ
ಬೆಂಗಳೂರು: ಇಂದು (ಡಿ.03) ಮಂಗಳೂರಿನ ಅತಿಥಿ ಗೃಹದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರ ಕೇಳಿಬರುತ್ತಿರುವುದರ ನಡುವೆಯೇ ವೇಣುಗೋಪಾಲ್​ ಅವರನ್ನು ಸಿದ್ದರಾಮಯ್ಯ ಅವರು ಭೇಟಿ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ. ಉಭಯ ನಾಯಕರ ನಡುವೆ ಏನು ಚರ್ಚೆ ನಡೆದಿದೆ ಎಂಬದು ತಿಳಿದುಬಂದಿಲ್ಲ. ಆದರೆ, ಪ್ರಸ್ತುತ ಕಾಂಗ್ರೆಸ್​ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಪರಸ್ಪರ ಬ್ರೇಕ್​ಫಾಸ್ಟ್​ ಮೀಟಿಂಗ್​ ನಡೆದ ಬಳಿಕ​ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆಗೆ ಬ್ರೇಕ್​ ಬಿದ್ದಿದೆ. ಆದರೂ, ತೆರೆಮರೆಯಲ್ಲಿ ಕುರ್ಚಿ ಕಸರತ್ತು ಇನ್ನೂ ಜೀವಂತವಾಗಿದೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ತಣ್ಣಗಾಗಿರುವ ಕುರ್ಚಿ ಕದನ ಇನ್ನು ಒಂದು ತಿಂಗಳ ಬಳಿಕ ಮತ್ತೆ ಮುನ್ನಲೆಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿನ್ನೆ ಸಿಎಂ ಅಚ್ಚರಿ ಹೇಳಿಕೆ

ಶನಿವಾರವಷ್ಟೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಅವರನ್ನು ತಮ್ಮ ಮನೆಗೆ ಬ್ರೇಕ್​ಫಾಸ್ಟ್​ಗೆ ಆಹ್ವಾನಿಸಿದ್ದರು. ಅದೇ ರೀತಿ ನಿನ್ನೆ (ಡಿ.02) ಮುಖ್ಯಮಂತ್ರಿಗಳು, ಡಿಕೆಶಿ ಮನೆಗೆ ಉಪಾಹಾರಕ್ಕಾಗಿ ಭೇಟಿ ನೀಡಿ ಬಂದಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಕಾಂಗ್ರೆಸ್​ ಹೈಕಮಾಂಡ್‌ಗೆ ಸಂದೇಶವೊಂದನ್ನು ರವಾನಿಸಿದರು. ವಿಧಾನಸೌಧದ ಕೆಂಗಲ್ ಗೇಟ್ ಪ್ರವೇಶ ದ್ವಾರದ ಬಳಿ ಶಾಸಕ ಗೋಪಾಲಕೃಷ್ಣ ಜತೆ ಮುಖಾಮುಖಿ ಮಾತನಾಡುವಾಗ, ರಾಜಕೀಯ ಯಾರಿಗೂ ಶಾಶ್ವತವಲ್ಲ, ಅದೇನಾಗುತ್ತೆ ಆಗಲಿ, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ಅಲ್ಲದೆ, ರಾಜಕೀಯ ಏನು ನಮ್ಮಪ್ಪನ ಆಸ್ತಿ ಅಲ್ಲ, ನಾನೆಂದಿಗೂ ತುಂಬಾ ಯೋಚನೆ ಮಾಡಿದವನೇ ಅಲ್ಲ ಎಂದು ಖಡಕ್​ ಮಾತುಗಳನ್ನು ಆಡಿದರು.
ಡಿ.ಕೆ. ಶಿವಕುಮಾರ್​ ಅವರ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮಾಡಿದ ದಿನವೇ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಹೈಕಮಾಂಡ್​ಗೆ ಖಡಕ್​ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.
ಅಂದಹಾಗೆ, ರಾಜ್ಯ ರಾಜಕಾರಣ ಇದೀಗ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಸಿಎಂ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್​ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದರ ನಡುವೆ ಹೈಕಮಾಂಡ್​ ಸೂಚನೆಯಂತೆ ಸಿದ್ದು ಮತ್ತು ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಮಾಡಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಡಿಸೆಂಬರ್​ 8ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ವಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣದಿಂದ, ಉಭಯ ನಾಯಕರು ಒಟ್ಟಿಗೆ ಬ್ರೇಕ್​ಫಾಸ್ಟ್​ ಮಾಡುವ ಮೂಲಕ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ಪ್ರದರ್ಶಿಸಿದ್ದಾರೆ. ಆದರೆ, ತೆರೆಮರೆಯಲ್ಲಿ ಮಾತ್ರ ಕುರ್ಚಿ ಕದನ ನಡೆಯುತ್ತಲೇ ಇದೆ ಎಂಬ ಮಾತುಗಳಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net