ವಿಶ್ವಾಸದ್ರೋಹದ ಇತಿಹಾಸ ಬಿಜೆಪಿಯದ್ದು: ಮೋದಿಯವರ ಆರೋಪಕ್ಕೆ ಎದಿರೇಟು ಕೊಟ್ಟ CM Siddaramaiah

CM Siddaramaiah
CM Siddaramaiah
Published on
ಬೆಂಗಳೂರು: "ಬೆಂಗಳೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೋ? ಅಥವಾ ವಿರೋಧ ಪಕ್ಷದ ನಾಯಕರಾಗಿಯೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರಧಾನಿಯವರ ಭಾಷಣದಲ್ಲಿ ಕೇವಲ ಅಸಹಾಯಕತೆ ಮತ್ತು ದ್ವೇಷ ಅಡಗಿತ್ತು ಎಂದು ಟೀಕಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಮೋದಿ ಮಾಡಿದ ಆರೋಪಗಳನ್ನು ಅಂಕಿ-ಅಂಶಗಳ ಸಮೇತ ತಳ್ಳಿಹಾಕಿದ್ದಾರೆ.

ಪ್ರಧಾನಿ ಕುರ್ಚಿಯ ಘನತೆ ಮಣ್ಣುಪಾಲು

ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರಂತಹ ಮಹಾನ್ ನಾಯಕರು ಪ್ರಧಾನಿ ಕುರ್ಚಿಯ ಘನತೆಯನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ, ನರೇಂದ್ರ ಮೋದಿಯವರು ಕೀಳುಮಟ್ಟದ ಬೀದಿ ಭಾಷಣಗಳ ಮೂಲಕ ಆ ಗೌರವವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಮೋದಿಯವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ರ‍್ಯಾಲಿಯ ಗುಂಗಿನಲ್ಲಿಯೇ ಇದ್ದಂತೆ ಕಂಡರು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ವೈಫಲ್ಯ ಮರೆಮಾಚುವ ಹತಾಶೆ!

"ತನ್ನ ಎಲೆ ಮೇಲೆ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆ ಮೇಲೆ ಸತ್ತುಬಿದ್ದ ನೊಣವನ್ನು ಹುಡುಕಾಡುವ ಢೋಂಗಿ ಬುದ್ಧಿ ಮೋದಿಯವರದ್ದು" ಎಂದು ಸಿಎಂ ಕಿಡಿಕಾರಿದರು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ತೋರಿಸಿದ್ದ ಪ್ರಧಾನಿಯವರು, ಈಗ ಜನರಿಗೆ 'ಚಿನ್ನ ಕೊಳ್ಳಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ವಿದೇಶಕ್ಕೆ ಹೋಗಬೇಡಿ' ಎಂದು ಬೇಡಿಕೊಳ್ಳುತ್ತಿರುವುದು ದೇಶದ ಆರ್ಥಿಕ ಅಧೋಗತಿಗೆ ಸಾಕ್ಷಿ. ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತ ಸಿಲುಕಿಕೊಳ್ಳಲು ಕೇಂದ್ರದ ಎಡಬಿಡಂಗಿ ವಿದೇಶಾಂಗ ನೀತಿಯೇ ಕಾರಣ. ಈ ವೈಫಲ್ಯಕ್ಕೂ ನೀವು ನೆಹರೂ ಅವರನ್ನೇ ದೂರುತ್ತೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕರ್ನಾಟಕದ ಆರ್ಥಿಕತೆ ಸುಭದ್ರ

ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ ಸಿಎಂ, ಕರ್ನಾಟಕವು ದೇಶದ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು. ದೇಶದ ತಲಾವಾರು ಆದಾಯ 2.11 ಲಕ್ಷ ರೂ. ಇದ್ದರೆ, ಕರ್ನಾಟಕದ್ದು 4.33 ಲಕ್ಷ ರೂ.ದೇಶದ ಜಿಡಿಪಿ ಬೆಳವಣಿಗೆ ಶೇ. 7.4 ಇದ್ದರೆ, ಕರ್ನಾಟಕದ್ದು ಶೇ. 8.1 ರಷ್ಟಿದೆ.ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ."ಪ್ರಧಾನಿಗಳೇ, ಕರ್ನಾಟಕದ ಅಭಿವೃದ್ಧಿಗೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೆ? ಮುಂದಿನ ಬಾರಿ ಆರೋಪ ಮಾಡುವಾಗ ಸ್ವಲ್ಪ ಹೋಮ್‌ವರ್ಕ್ ಮಾಡಿಕೊಂಡು ಬನ್ನಿ" ಎಂದು ಸಲಹೆ ನೀಡಿದರು.

ವಿಶ್ವಾಸದ್ರೋಹದ ಪಟ್ಟಿ

ಕಾಂಗ್ರೆಸ್ ಮೇಲೆ ವಿಶ್ವಾಸದ್ರೋಹದ ಆರೋಪ ಮಾಡಿದ ಮೋದಿಯವರಿಗೆ, ಬಿಜೆಪಿ ಈ ಹಿಂದೆ ಬಿಎಸ್‌ಪಿ, ಟಿಎಂಸಿ, ಶಿವಸೇನೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿಗೆ ಎಸಗಿದ ದ್ರೋಹದ ಪಟ್ಟಿಯನ್ನು ನೆನಪಿಸಿದರು. ವಿರೋಧ ಪಕ್ಷದ ನಾಯಕರನ್ನು ಬ್ಲಾಕ್ ಮೇಲ್ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಬಿಜೆಪಿಯಲ್ಲಿ ಏಡಿಗಳ ಕಾದಾಟ!

ರಾಜ್ಯ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿರುವ ಏಡಿಗಳಂತಾಗಿದೆ. ಯಡಿಯೂರಪ್ಪ ಅವರ ವಿರುದ್ಧ ಅವರದ್ದೇ ಪಕ್ಷದಲ್ಲಿ ಅರ್ಧ ಡಜನ್ ಗುಂಪುಗಳಿವೆ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ. ಅಮಾನತುಗೊಂಡವರ ಕಾಲಿಗೆ ಬಿದ್ದು ಕರೆತರುವ ಸ್ಥಿತಿಗೆ ಬಿಜೆಪಿ ತಲುಪಿದೆ. "ಮೋದಿಯವರೇ, ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ" ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net