ಎಲ್ಲರೂ 10 ಗಂಟೆಗೆ ಆಫೀಸ್​ಗೆ ಹಾಜರಾಗಬೇಕು! ಉತ್ತಮ ಆಡಳಿತಕ್ಕೆ ಸಿಎಂ ಡಿಕೆಶಿ ಖಡಕ್ ಸೂಚನೆ

ಸಿಎಂ ಡಿಕೆ ಶಿವಕುಮಾರ್​
ಸಿಎಂ ಡಿಕೆ ಶಿವಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ ಸಿಎಂ ಡಿಕೆ ಶಿವಕುಮಾರ್​
  • ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು 10 ಗಂಟೆಗೆ ಹಾಜರಿರಬೇಕು
  • ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ
ಬೆಂಗಳೂರು: ಇಂದು (ಜೂ.13) ರಾಜ್ಯದ ಡಿಸಿ, ಎಸ್ಪಿ, ಡಿಎಫ್ಓಗಳ ಜೊತೆಗೆ ಮೊದಲ ಮಹತ್ವದ ಸಭೆ ನಡೆಸಿದ ಸಿಎಂ ಡಿಕೆ ಶಿವಕುಮಾರ್, ಇನ್ಮುಂದೆ ಪ್ರತಿಯೊಬ್ಬ ನೌಕರನ್ನು 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು ಎಂಬ ಖಡಕ್ ಸೂಚನೆ ನೀಡಿದ್ದಾರೆ.
"ನಮ್ಮದು ಒಂದೇ ತಂಡ. ಟೀಮ್ ಕರ್ನಾಟಕದಡಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಸಾರ್ವಜನಿಕರ ಸಮಸ್ಯೆಗಳಿಂದ ನಮ್ಮ ಬಳಿಗೆ ಬರುತ್ತಾರೆಯೇ ಹೊರತು ಸುಖಾಸುಮ್ಮನೆ ಯಾರೂ ಡಿಸಿ, ತಾಲೂಕು ಕಚೇರಿಗಳಿಗೆ ಬರುವುದಿಲ್ಲ. ಹೀಗಾಗಿ, ಎಲ್ಲರೂ 10 ಗಂಟೆಗೆ ಸರಿಯಾಗಿ ಆಫೀಸ್​ಗೆ ಹಾಜರಿ ಹಾಕಬೇಕು. ಇದರಲ್ಲಿ ಜಿಪಿಎಸ್, ಥಂಬ್​ ಬರಬೇಕು. ಜೊತೆಗೆ ವಿಎ, ಡಿಸಿ, ಪಿಡಿಓ ಎಲ್ಲರೂ ಹೆಡ್ ಕ್ವಾಟ್ರಸ್​ನಲ್ಲಿ ಇರುವುದು ಕಡ್ಡಾಯ" ಎಂದರು.

ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕೆ ಒತ್ತು

"ಸಾರ್ವಜನಿಕರು ಸರ್ಕಾರದ ಸಹಾಯವಾಣಿಗೆ ಕರೆ ಮಾಡಬಹುದು. ಎಲ್ಲ ವರ್ಗದ ನೌಕರರು ಕಚೇರಿಯಲ್ಲಿ ‌ಇರುವುದು ಕಡ್ಡಾಯ. ಪ್ರತಿಯೊಂದು ಪೋಲೀಸ್ ಠಾಣೆಯಲ್ಲಿ ಸೈಬರ್ ಕ್ರೈಮ್ ಬಗ್ಗೆ ಗಮನ ಹರಿಸಬೇಕು. ಪ್ರತಿ ಜಿಲ್ಲೆಗೂ ಪ್ರವಾಸ ಮಾಡುವೆ ಮತ್ತು ಆಯಾ ತಾಲೂಕು ಸಂಪರ್ಕ ಸಭೆಗೆ ಸಚಿವರು ಹೋಗಬೇಕು" ಎಂದು ಆದೇಶಿಸಿದರು.
"ಹೋಬಳಿ ಮಟ್ಟದ ಸಭೆಗೆ ಶಾಸಕರು ಆಗಮನ ಅಗತ್ಯ. ಪ್ರತಿ ಪಂಚಾಯತ್​ಗೆ ಅಧಿಕಾರಿಗಳು ಭೇಟಿ ನೀಡಿ, ಎಸ್​ಐಆರ್ ಕುರಿತು ಜಾಗೃತಿ ಮೂಡಿಸಬೇಕು. ನಮಗೆ ಪ್ರಜ್ಞಾವಂತ ಸಮಾಜ ಮುಖ್ಯ. ನೀರಿನ ಸಮಸ್ಯೆಯೂ ‌ಇದೆ. ಹೀಗಾಗಿ, ಮೇವಿನ ಕೊರತೆ ಉಂಟಾಗದಂತೆ ಗಮನ ಹರಿಸಿ. ಇನ್ನು ಅಧಿಕಾರಿಗಳು ಪ್ರತಿ ಹಾಸ್ಟಲ್​ಗಳಿಗೆ ಭೇಟಿ ನೀಡಿ, ಅಲ್ಲಿನ ಊಟದ ರುಚಿ ಪರಿಶೀಲಿಸಬೇಕು" ಎಂದು ಹೇಳಿದರು.

ಗ್ಯಾರಂಟಿ ಯೋಜನೆಗೆ ತೊಂದರೆ!

"ಮತದಾನದ ಹಕ್ಕು, ಎಸ್​ಐಆರ್ ಆರಂಭವಾಗುತ್ತಿದೆ. ಬಿಎಲ್​ಓಗಳಿಗೆ ಮಾಹಿತಿ ನೀಡಿ, ಮತದಾನದ ಹಕ್ಕು ಸಿಗುವಂತೆ ಮಾಡಬೇಕು. ಮ್ಯಾಪಿಂಗ್ ಲೆಕ್ಕ ಇಲ್ಲ. ಯಾವುದೇ ಮತದಾರರ ಲೆಕ್ಕ ತಪ್ಪಬಾರದು. ಯಾರೇ ಕೆಲಸ ಮಾಡುತ್ತಿದ್ದರೂ ಅವರ ದಾಖಲೆ ಪಡೆದು ಮತದಾನದ ಸಹಿ ಹಾಕಿಸಿ ನೀಡಿ. ಮನೆ ವಿಳಾಸ ನೀಡಬೇಕು. ಮತದಾನದ ಹಕ್ಕು ಇಲ್ಲದಿದ್ದರೆ, ಗ್ಯಾರಂಟಿ ಯೋಜನೆಗೆ ಕಷ್ಟ ಆಗಲಿದೆ ಎಂಬುದು ನೆನಪಿರಲಿ" ಎಂದರು.
"ಆರ್ಥಿಕ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆ ಹೋಗುತ್ತಿದೆ. ನಮ್ಮ ರಾಜ್ಯದವರಿಗೆ ಮಾತ್ರನಾ ಅಥವಾ ಬೇರೆ ರಾಜ್ಯದವರಿಗೆ ತಲುಪುತ್ತಿದೆಯೇ ಎಂಬ ಮಾಹಿತಿ ಬೇಕಿದೆ. ವಾಸಕ್ಕೆ ಮಾತ್ರ ಉಚಿತ ವಿದ್ಯುತ್​ ಹೊರತು ಅಂಗಡಿಗಳಿಗಿಲ್ಲ. ಇನ್ನು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರದ ಶಾಲೆಗಳು ಮುಂಚೂಣಿಯಲ್ಲಿರಬೇಕು. ಮೊರಾರ್ಜಿ ಶಾಲೆಯಂತೆ ಉತ್ತಮ ಶಾಲೆಗಳ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ" ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net