ಹೊಸಪೇಟೆ: ನಗರದ ಧೋಬಿ ಘಾಟ್ ಬಳಿ ಸೇತುವೆಗೆ ಬಿದ್ದಿರುವ ದೊಡ್ಡ ಕಂದಕ ಮುಚ್ಚುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಯುವ ಘಟಕದಿಂದ ಮಂಗಳವಾರ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಅಧ್ಯಕ್ಷ ಎಚ್.ಈರಣ್ಣ ಮಾತನಾಡಿ, ನಗರದ ಧೋಬಿ ಘಾಟ್ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆಯಿದ್ದು ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ.
ಸೇತುವೆಯ ಬಳಿ ದೊಡ್ಡ ಕಂದಕ ಇರುವುದರಿಂದ ಅಪಘಾತಗಳು ಸಂಭವಿಸಿವೆ. ಕೆಲವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಕಂದಕ ಮುಚ್ಚಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಚಾರ ತಡೆದಿದ್ದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಪೌರಾಯುಕ್ತ ಶಿವಕುಮಾರ್ ಯರಗುಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಶೀಘ್ರ ಸಮಸ್ಯೆ ಪರಿಹರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.