ಸಂಚಾರ ಸುಧಾರಣೆಗೆ ‘ನಗರ ಸಂಚಾರ ಮಿಷನ್ ಸಮಿತಿ’ ರಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ 7 ಕಾರ್ಯಪಡೆ

ಬೆಂಗಳೂರು :

ನಗರದಲ್ಲಿನ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹಾಗೂ ತಂತ್ರಜ್ಞಾನ ಆಧಾರಿತವಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಬೆಂಗಳೂರು ನಗರ ಸಂಚಾರ ಮಿಷನ್ ಸಮಿತಿ’ ರಚಿಸಿ ಆದೇಶ ಹೊರಡಿಸಿದೆ.

ಸಮಿತಿಯು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿದ್ದು, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಪಾಧ್ಯಕ್ಷರಾಗಿದ್ದಾರೆ, ಸದಸ್ಯರಾಗಿ ಗೃಹ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೆಂಗಳೂರು ನಗರ ಪೊಲೀಸ್, ನಗರಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಬಿಬಿಎಂಪಿ ಸಂಬಂಧಿತ ಸಂಸ್ಥೆಗಳು, ನಗರ ಭೂ ಸಾರಿಗೆ ನಿರ್ದೇಶನಾಲಯ, ಸಾರಿಗೆ ಇಲಾಖೆ, ಬಿಎಂಟಿಸಿ, ಮೆಟ್ರೋ, ಬೆಂಗಳೂರು ಜಲಮಂಡಳಿ, ಲೋಕೋಪಯೋಗಿ, ಕೆ-ರೈಡ್, ರಾಜ್ಯ ರಸ್ತೆ ಸಾರಿಗೆ, ಬೆಸ್ಕಾಂ, ಕೆಪಿಟಿಸಿಎಲ್, ರಾಷ್ಟ್ರೀಯ ಹೆದ್ದಾರಿ ಸಂಸ್ಥೆಗಳು ಸೇರಿ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಹಿರಿಯ ಅಧಿಕಾರಿಗಳಿದ್ದಾರೆ.
ನಮ್ಮ ಯಾತ್ರಿ, ಊಬರ್, ರ‌್ಯಾಪಿಡೊ, ಓಲಾ ಸೇರಿ ವಿವಿಧ ಖಾಸಗಿ ಸಂಚಾರ ವೇದಿಕೆಗಳು, ವಿವಿಧ ಸಂಘಟನೆಗಳು ಹಾಗೂ ಲಾಜಿಸ್ಟಿಕ್ ವಲಯದ ಪ್ರತಿನಿಧಿಗಳೂ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಸ್ತೆ ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನಾಗರಿಕ ಸಮಾಜದ ಪ್ರತಿನಿಧಿಗಳೂ ಸಮಿತಿಯ ಭಾಗವಾಗಿದ್ದಾರೆ.
ಏಳು ಕಾರ್ಯಪಡೆಗಳ ರಚನೆ: ಸಮಿತಿಯ ಅಡಿಯಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ ಸಮನ್ವಯ, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ, ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಕ್ಲಸ್ಟರ್ ಸಂಚಾರ, ಡಿಜಿಟಲ್ ಸಂಚಾರ ಮತ್ತು ದತ್ತಾಂಶ, ನಗರ ಸರಕು ಮತ್ತು ವಿತರಣಾ ಸಂಚಾರ, ಮೂಲಸೌಕರ್ಯ ಮತ್ತು ರಸ್ತೆ ಕಾಮಗಾರಿಗಳ ಸಮನ್ವಯ ಸೇರಿದಂತೆ ಏಳು ಕಾರ್ಯಪಡೆಗಳನ್ನು ರಚಿಸಲಾಗಿದೆ.

ಮೂರು ತಿಂಗಳಿಗೊಮ್ಮೆ ಸಭೆ..!

ಪ್ರತಿ ಮೂರು ತಿಂಗಳಿಗೊಮ್ಮೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ನಡೆಯಲಿದೆ ಮತ್ತು ಕಾರ್ಯಪಡೆಗಳೊಂದಿಗೂ ಸಹ ತ್ರೈಮಾಸಿಕ ಸಭೆ ನಡೆಯಲಿದೆ. ಪ್ರಗತಿ ವರದಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸಲ್ಲಿಸಲಾಗುವುದು ಮತ್ತು ವಾರ್ಷಿಕ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಸಮಿತಿಯ ಕಾರ್ಯವೇನು.?

  • ಸಾಮಾನ್ಯ ಬೆಂಗಳೂರು ಸಂಚಾರ ಕ್ರಿಯಾ ಯೋಜನೆ ರೂಪಿಸುವುದು.
  • ಪ್ರಮುಖ ಸಂಚಾರ ದಟ್ಟಣೆ ಉಂಟಾಗುವ ರಸ್ತೆಗಳು ಮತ್ತು ಜಂಕ್ಷನ್‌ಗಳನ್ನು ಗುರುತಿಸುವುದು
  • ಸಾರ್ವಜನಿಕ ಹಾಗೂ ಖಾಸಗಿ ಸಂಚಾರ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು
  • ಮೊಬಿಲಿಟಿ ಡ್ಯಾಶ್‌ಬೋರ್ಡ್ ರೂಪಿಸುವುದು, ದತ್ತಾಂಶ ಹಂಚಿಕೆ ವ್ಯವಸ್ಥೆ ಸ್ಥಾಪಿಸುವುದು
  • ಮೆಟ್ರೋ, ಬಸ್, ಉಪನಗರ ರೈಲು ನಿಲ್ದಾಣಗಳ ಸುತ್ತ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ಸುಧಾರಿಸುವುದು
  • ಪಾದಚಾರಿ ಮತ್ತು ಸೈಕಲ್ ಸೌಲಭ್ಯ ಅಭಿವೃದ್ಧಿಪಡಿಸುವುದು ಹಾಗೂ ಕೈಗೊಂಡ ಕ್ರಮಗಳ ಪ್ರಗತಿ ಅಳೆಯುವುದು
"

ಪ್ರಯಾಣಿಕರ ಅನುಭವ, ಸುರಕ್ಷತೆ ಮತ್ತು ಸಂಚಾರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ರೂಪಿಸುವ ಜತೆಗೆ ನೈಜ-ಸಮಯದ ದತ್ತಾಂಶ ಹಂಚಿಕೆ ಮತ್ತು ಡ್ಯಾಶ್‌ಬೋರ್ಡ್ ಆಧಾರಿತ ಮೇಲ್ವಿಚಾರಣೆಗೆ ಸಮಿತಿ ಒತ್ತು ನೀಡಲಿದೆ.

— - ಪ್ರಿಯಾಂಕ್ ಖರ್ಗೆ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net