ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಸಿಐಟಿಯು ಸಂಘಟನೆ ಮುಖಂಡರು ಮಂಗಳವಾರ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಅಧಿಸೂಚನೆ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಚಾಲಕ ಡಿ.ಎಸ್.ಶರಣಬಸವ ಮಾತನಾಡಿ, ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದೆ.
ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. 2019ರಲ್ಲಿ ವೇತನ ಸಂಹಿತೆ ಜಾರಿಯಾದ ಬಳಿಕ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ.
ನಾಲ್ಕು ಕಾರ್ಮಿಕ ಸಂಹಿತೆಗಳು ಕಾಯಂ ಉದ್ಯೋಗದ ಅವಕಾಶಗಳನ್ನು ಕಡಿಮೆ ಮಾಡಲಿದ್ದು, ಕಾರ್ಮಿಕರ ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಕಸಿದುಕೊಳ್ಳಲಿವೆ ಎಂದು ದೂರಿದರು.