ರಂಗ ಶಂಕರ ತಂಡದಿಂದ 'ಸರ್ಕಲ್ ಆಫ್ ಲೈಫ್' ಮೂಕನಟನಾ ಪ್ರದರ್ಶನ

photo
photo
Published on
ಕಲಬುರಗಿ: ಕಲಬುರಗಿ ನಾಟಕೋತ್ಸವ–2026ರ ಅಂಗವಾಗಿ ಫೆಬ್ರವರಿ 23 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ರಂಗಾಯಣದಲ್ಲಿ ‘ಸರ್ಕಲ್ ಆಫ್ ಲೈಫ್’ ಎಂಬ ಮಾತಿಲ್ಲದ ಮೂಕನಟನಾ ಪ್ರದರ್ಶನ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ನಾಟಕವನ್ನು ರಂಗ ಶಂಕರ ನಿರ್ಮಿಸಿದ್ದು, ಸುರೇಂದ್ರನಾಥ ಎಸ್. ಅವರು ನಿರ್ದೇಶನ ವಹಿಸಿದ್ದರು.
ಈ ನಾಟಕವು ಮನುಷ್ಯನ ಬಾಲ್ಯದಿಂದ ವೃದ್ಧಾಪ್ಯದವರೆಗಿನ ವಿವಿಧ ಹಂತಗಳನ್ನು ದೈಹಿಕ ಮತ್ತು ಭಾವನಾತ್ಮಕವಾಗಿ ಚಿತ್ರಿಸುತ್ತದೆ. ಮಗು ಹಿರಿಯನಾಗುವುದು ಅಥವಾ ಒಬ್ಬ ಹಿರಿಯ ವ್ಯಕ್ತಿ ಮಗುವಿನಂತೆ ಬದಲಾಗುವುದು ಜೀವನದ ಸುಂದರ ಚಕ್ರವನ್ನು ಪೂರ್ಣಗೊಳಿಸುತ್ತದೆ ಎಂಬ ಆಶಯವನ್ನು ಇದು ಹೊಂದಿದೆ. ಪ್ರಕೃತಿಯನ್ನು ನಾವು ಹೇಗೆ ಸಂರಕ್ಷಿಸುತ್ತೇವೆಯೋ, ಅದೇ ರೀತಿ ಮಾನವ ಜೀವನದ ಪ್ರತಿಯೊಂದು ಘಟ್ಟವನ್ನೂ (ಬಾಲ್ಯ, ಯೌವನ, ವೃದ್ಧಾಪ್ಯ) ಗೌರವಿಸಬೇಕು ಮತ್ತು ಪೋಷಿಸಬೇಕು ಎಂಬ ಉದಾತ್ತ ಸಂದೇಶವನ್ನು ಈ ಮೂಕನಾಟಕವು ಸಾರುತ್ತದೆ.
ಮಾತುಗಳಿಲ್ಲದೆ ಕೇವಲ ಪಪೆಟ್‌ಗಳ ಚಲನೆ, ಭಾವಾಭಿನಯ ಮತ್ತು ದೃಶ್ಯ ಸಂಕೇತಗಳ ಮೂಲಕ ಮಾನವ ಜೀವನದ ಸೌಂದರ್ಯವನ್ನು ನಾಟಕವು ಮನಮುಟ್ಟುವಂತೆ ಚಿತ್ರಿಸಿತು. ಬಾಲ್ಯದಿಂದ ಯೌವನ, ನಂತರ ವೃದ್ಧಾಪ್ಯದವರೆಗೆ ಸಾಗುವ ಮಾನವ ಜೀವನದ ಚಕ್ರವನ್ನು ಈ ನಾಟಕವು ಸರಳವಾದರೂ ಗಾಢ ಅರ್ಥಪೂರ್ಣವಾಗಿ ಪ್ರೇಕ್ಷಕರ ಮುಂದಿಟ್ಟಿತು.
ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಲಾದ ಈ ಪ್ರದರ್ಶನವು ಮಕ್ಕಳಷ್ಟೇ ಅಲ್ಲದೆ ಪೋಷಕರಿಗೂ ಚಿಂತನೆಗೆ ದಾರಿ ಮಾಡಿಕೊಟ್ಟಿತು. ಪಪೆಟ್‌ಗಳ ಮೂಲಕ ವ್ಯಕ್ತವಾದ ಭಾವನೆಗಳು ಮಕ್ಕಳ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸಿದವು. ಕಲಬುರಗಿ ನಾಟಕೋತ್ಸವದ ಭಾಗವಾಗಿ ನಡೆದ ಈ ಪಪೆಟ್ ನಾಟಕವು ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಜೀವನ ಮೌಲ್ಯಗಳ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿತು.
ಕಾರ್ಯಕ್ರಮದಲ್ಲಿ ರಂಗಾಯಣದ ಆಡಳಿತಾಧಿಕಾರಿಯಾದ ಸಿದ್ರಾಮ ಸಿಂಧೆ, ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶೃಂಗಾ, ಶ್ರವಣ, ಗಗನ ಹಾಗೂ ಅರುಣ ರವರು ಪಪೆಟಗಳನ್ನು ಪ್ರದರ್ಶಿಸಿದರು, ಮುದ್ದಣ್ಣ ಅವರು ಲೈಟಿಂಗ್ಸ ಮಾಡಿದರು, ವೆಂಕಟೇಶ ಅವರು ಮೂಸಿಕ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net