ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಚರ್ಚ್‌ಗಳಲ್ಲಿ ಗುರುವಾರ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ವೇಳಾಂಗಣ ಆರೋಗ್ಯ ಮಾತೆಯ ದೇಗುಲದಲ್ಲಿ ರಾತ್ರಿ 11.30ರಿಂದ 2.30ರವರೆಗೆ ಧರ್ಮಗುರು ಎಸ್.ರೋಷನ್ ಅವರ ನೇತೃತ್ವದಲ್ಲಿ ಬಲಿಪೂಜೆ, ಕೀರ್ತನೆಗಳು ಹಾಗೂ ಪ್ರಾರ್ಥನೆಗಳು ಜರುಗುವುದರ ಮೂಲಕ ಕ್ರಿಸ್ತನಿಗೆ ನಮನ ಸಲ್ಲಿಸಲಾಯಿತು. ಈ ವೇಳೆ ಕ್ರಿಸ್‌ಮಸ್ ಹಬ್ಬದ ಶುಭ ಸಂದೇಶವನ್ನು ತಿಳಿಸಲಾಯಿತು. ಯೇಸುವಿನ ಸಂದೇಶಗಳ ಬಗ್ಗೆ ಬೋಧನೆ ನೀಡಲಾಯಿತು. ಪೂಜೆ ಹಾಗೂ ಕೀರ್ತನೆಗಳು ಮುಗಿದ ಬಳಿಕ ಸಿಹಿ ವಿತರಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ಆಯಾ ಗ್ರಾಮದ ಚರ್ಚ್‌ಗಳಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ, ಪೂಜೆಯಲ್ಲಿ ಪಾಲ್ಗೊಂಡು ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಗಮನ ಸೆಳೆದ ಗೋದಲಿ: ಯೇಸುಕ್ರಿಸ್ತರು ದನದ ಕೊಟ್ಟಿಗೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವೇಳಾಂಗಣ ಆರೋಗ್ಯ ಮಾತೆ ದೇಗುಲದ ಆವರಣ ಸೇರಿದಂತೆ ತಾಲೂಕು ವ್ಯಾಪ್ತಿಯ ಚರ್ಚ್ ಆವರಣದಲ್ಲಿ ಬಾಲಯೇಸು ಜನಿಸಿದ ಸನ್ನಿವೇಶದ ಚಿತ್ರಣವನ್ನೊಳಗೊಂಡ ಗೋದಲಿ ನಿರ್ಮಾಣ ಮಾಡಿ ಪ್ರದರ್ಶನಕ್ಕೆ ಇಡಲಾಗಿತ್ತು. ಗೋದಲಿಯನ್ನು ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯಿತು. ಗೋದಲಿಯನ್ನು ಕ್ರೈಸ್ತರು ಮಾತ್ರರಲ್ಲದೆ ಸಾರ್ವಜನಿಕರು ಸಹ ವೀಕ್ಷಿಸಿ ಕಣ್ತುಂಬಿಕೊಂಡರು. ಇನ್ನು ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.
ವಿವಿಧೆಡೆ ಸಡಗರ: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹನೂರು ಸೇರಿದಂತೆ ಹೆಚ್ಚು ಕೈಸ್ತರಿರುವ ಮಾರ್ಟಳ್ಳಿ, ಹೂಗ್ಯಂ, ಸಂದನಪಾಳ್ಯ, ಸುಳ್ವಾಡಿ, ವಡ್ಡರದೊಡ್ಡಿ, ವಡಕೆಹಳ್ಳ, ಕಾಮಗೆರೆ, ತೊಮಿಯಾರ್ ಪಾಳ್ಯ, ಅಣಗಳ್ಳಿದೊಡ್ಡಿ, ಕೌದಳ್ಳಿ, ಪಿ.ಜಿ ಪಾಳ್ಯ ಹಾಗೂ ಕ್ಷೇತ್ರ ವ್ಯಾಪ್ತಿಯ ಇನ್ನಿತರ ಗ್ರಾಮಗಳಲ್ಲಿ ಕ್ರೈಸ್ತರು ಆಯಾ ಗ್ರಾಮದ ಚರ್ಚ್‌ನ ಧರ್ಮಗುರುಗಳ (ಫಾದರ್) ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥಿಸುವುದರ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.