ಶಾಲೆಯಲ್ಲಿ ಚಿಗುರೊಡೆವ ಮಕ್ಕಳ ಅಭಿರುಚಿ

ಸರಗೂರು ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಜಮ್ಮ, ಪರಮೇಶ್, ರವಿಕುಮಾರ್, ಪ್ರಸನ್ನ ಕುಮಾರ್, ಚೈತ್ರಾ ಸ್ವಾಮಿ ಇತರರು ಇದ್ದರು.
ಸರಗೂರು ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಜಮ್ಮ, ಪರಮೇಶ್, ರವಿಕುಮಾರ್, ಪ್ರಸನ್ನ ಕುಮಾರ್, ಚೈತ್ರಾ ಸ್ವಾಮಿ ಇತರರು ಇದ್ದರು.
Published on
ಸರಗೂರು: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಹೊರ ತರಲು ಸಹಕಾರಿ. ಶಾಲೆಯಲ್ಲಿನ ಪ್ರತಿಭೆ ಪುರಸ್ಕರಿಸುವ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಪ್ರಾದೇಶಿಕ ವಿಭಾಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಶ್ಲಾಘಿಸಿದರು.

ಪಟ್ಟಣದ 11ನೇ ವಾರ್ಡ್‌ನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪ್ರಗತಿ ಯಾನ 2025-26 ಸಾಲಿನ 18ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳೆಂದರೆ ಬೀಜ ಬಿತ್ತುವುದಕ್ಕಿರುವ ಹಸನಾದ ನೆಲದಂತೆ. ಯಾವ ಬೀಜ ಬಿತ್ತಿದರೂ ತಕ್ಷಣ ಬೇರಿಳಿಸಿಕೊಳ್ಳುತ್ತವೆ. ಬೀಜ ಮರವಾಗಿ ಒಳ್ಳೆಯ ಹಣ್ಣುಗಳನ್ನು ಕೊಡುತ್ತದೆಯೋ, ವಿಷದ ಹಣ್ಣುಗಳನ್ನು ಕೊಡುತ್ತದೆಯೋ ಎನ್ನುವುದನ್ನು ಆ ಮೃದು ನೆಲ ಗಮನಿಸುವುದಿಲ್ಲ. ಒಂದು ರೀತಿಯಲ್ಲಿ ಮೆದು ಗೋಡೆಯಿದ್ದ ಹಾಗೆ. ಆದ್ದರಿಂದಲೇ ಮನೆ ಮತ್ತು ಶಾಲೆಯ ಪರಿಸರ ಮಕ್ಕಳ ಪಾಲಿಗೆ ಚೆನ್ನಾಗಿರಬೇಕು. ಮಕ್ಕಳ ಅಭಿರುಚಿ ನಿರ್ಮಾಣವಾಗುವುದು ಇದೇ ಸಂದರ್ಭದಲ್ಲಿ. ಶಾಲಾ ಬದುಕಿನಲ್ಲಿ ವಾರ್ಷಿಕ ಪರೀಕ್ಷೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದಕ್ಕಿಂತ ಹೆಚ್ಚಾಗಿ ಅ ಶಾಲೆಯ ವಾರ್ಷಿಕೋತ್ಸವಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪುಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವುದು ಶ್ಲಾಘನೀಯ. ಇದನ್ನು ಸಮರ್ಪಕವಾಗಿ ಅಳವಡಿಸಿದಾಗ ಮಕ್ಕಳ ಬೆಳವಣಿಗೆ ಸಾಧ್ಯ ಎಂದರು.

ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗಬೇಕು. ಜತೆಗೆ ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಶಾಲಾ ಸಲಹೆಗಾರ ನಾಗಣ್ಣ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ವಿದ್ಯಾಸಂಸ್ಥೆ ಶಾಲಾ ಸಂಸ್ಥಾಪಕ ಧರ್ಮದರ್ಶಿ ಬಿ.ರಾಜಮ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ಚೆಲುವ ಕೃಷ್ಣ, ಧರ್ಮದರ್ಶಿಗಳಾದ ಡಾ. ಎನ್.ಎಸ್.ಇಂದಿರಾ ಉಮೇಶ್, ಜೆ.ಪಿ ಶಿವರಾಜು, ಕೆಂಡಗಣ್ಣಸ್ವಾಮಿ, ನಾಗಣ್ಣ,ಡಾ ಸುರೇಶ್ ಕುಮಾರ್, ಪಾಪಣ್ಣ, ಶಾಲಾ ಸಮಿತಿ ಕಾರ್ಯದರ್ಶಿ ಪಿ.ಆರ್. ಪಳನಿ ಸ್ವಾಮಿ, ಶಾಲಾ ನಿರ್ದೇಶಕ ಆರ್.ಶಿವಕುಮಾರ್, ಆಡಳಿತಾಧಿಕಾರಿ ಎಚ್.ಎಸ್.ಚೆಲುವ ಸ್ವಾಮಿ, ಮುಖ್ಯಶಿಕ್ಷಕ ಎಚ್.ಬಿ. ಚಂದ್ರೇಗೌಡ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಎನ್.ಮಂಜುಳಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net