ಹಕ್ಕುಗಳ ಪ್ರತಿಪಾದನೆಗೆ ಮಕ್ಕಳ ಗ್ರಾಮಸಭೆ ವೇದಿಕೆ / NANDAGUDI
ಕೊಂಡ್ರಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದಮಕ್ಕಳ ಗ್ರಾಮಸಭೆಯಲ್ಲಿ ಗ್ರಾಪಂ ಸದಸ್ಯರಾದ ಎನ್.ಎನ್. ಮಂಜುನಾಥ್, ಮುನೇಗೌಡ, ನಾಗಮ್ಮ, ಸುನೀತಾ ರಾಮೇಗೌಡ, ಜಿಪಂನ ಸಂಯೋಜಕ ಅಧಿಕಾರಿ ನಾಗರತ್ನಮ್ಮ, ತಾಪಂನ ಐಇಸಿ ಸಂಯೋಜಕ ಡಿ.ಮಧುಸೂದನ್, ಕಾರ್ಯದರ್ಶಿ ಉಷಾ, ಕರ ವಸೂಲಿಗಾರ ಮನೋಜ್, ಪ್ರಾಂಶುಪಾಲೆ ಉಷಾ ಇದ್ದರು.
ನಂದಗುಡಿ : ಮಕ್ಕಳು ಶೈಕ್ಷಣಿಕ ಸಂಪಾದನೆ ಜತೆಗೆ ಸಮಾಜದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು. ಸರ್ಕಾರ ಮಕ್ಕಳ ಸಮಸ್ಯೆಗಳನ್ನು ಅರಿತುಕೊಳ್ಳುವ ಉದ್ದೇಶದಿಂದ ಮಕ್ಕಳ ಗ್ರಾಮಸಭೆ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ನಂದಗುಡಿ ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ ಹೇಳಿದರು.
ನಂದಗುಡಿ ಹೋಬಳಿಯ ಕೊಂಡ್ರಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಆವರಣದಲ್ಲಿ ನಂದಗುಡಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ 2025-&26ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು. ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ನೂರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿ ಶೌಚಗೃಹ ನಿಮಾರ್ಣ, ಕೊಠಡಿಗಳ ದುರಸ್ತಿ, ಶಾಲಾ ಅವರಣದಲ್ಲಿ ಗಿಡ ನೆಡುವುದು, ಗ್ರಂಥಾಲಯ, ಪ್ರಯೋಗಾಲಯಗಳ ಸ್ಥಾಪನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಗ್ರಾಪಂ ಮೂಲಕ ಒದಗಿಸಿದೆ ಎಂದರು.
ಪಿಡಿಒ ಕೆಂಪಣ್ಣ ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಪಂಚಾಯಿತಿ ಜವಾಬ್ದಾರಿಯಾಗಿದೆ. ಮಕ್ಕಳನ್ನು ಪಾಲಕರು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ವಿಶ್ವ ಶೌಚಗಹ ದಿನದ ಅಂಗವಾಗಿ ನಮ್ಮ ಶೌಚಗೃಹನಮ್ಮ ಗೌರವ ಆಂದೋಲನ ನಡೆಸಲಾಯಿತು. ವಿದ್ಯಾರ್ಥಿನಿಯರು ಭಿತ್ತಿ ಪತ್ರ ಹಿಡಿದು ಜಾಗೃತಿ ಜಾಥಾ ನಡೆಸಿದರು. ಮಕ್ಕಳು ಶಾಲೆಯಲ್ಲಿರುವ ಕುಂದು ಕೊರತೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು.