ಜಾತಿ ಪ್ರಮಾಣಪತ್ರ ನೀಡೋವರೆಗೂ ಶಾಲೆಗೆ ಮಕ್ಕಳ ದಾಖಲಿಸಲ್ಲ

Children will not be admitted to school until caste certificate is provided.
Children will not be admitted to school until caste certificate is provided.
Published on
ಕೋಲಾರ: ಜಿಲ್ಲೆಯಲ್ಲಿರುವ ಬುಡ್ಗ ಜಂಗಮ ಮತ್ತು ಚನ್ನದಾಸರ ಜಾತಿಯ ಜನರಿಗೆ ಜಾತಿ ಪ್ರಮಾಣಪತ್ರ ಸಿಗದ ಕಾರಣ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿಲ್ಲ.ಈಗ ಅವರು ಓದಿದರೆ ನಂತರ ಕೂಲಿ ಮಾಡುವುರೂ ತಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಜಾತಿ ಪ್ರಮಾಣಪತ್ರ ನೀಡುವವರೆಗೂ ಶಾಲೆಗೆ ದಾಖಲಿಸಲ್ಲ ಎಂದು ನಿರ್ಧರಿಸಿದರು.
ಜಿಲ್ಲೆಯ ಮಾಲೂರು ತಾಲೂಕು ಲಕ್ಷಿ$್ಮಸಾಗರ ಶಾಲಾ ಆವರಣದಲ್ಲಿ ಬುಡ್ಗ ಜಂಗಮ ಮತ್ತು ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ನಿರ್ಧರಿಸಿದ ಸಮುದಾಯ ಮುಖಂಡರು ನಾವು ಮಾಡದ ತಪ್ಪಿಗೆ ಇಷ್ಟು ವರ್ಷ ಕಷ್ಟ ಅನುಭವಿಸಿಕೊಂಡು ಬಂದಿದ್ದೇವೆ. ಆದರೂ ಸಹ ಸರ್ಕಾರ ಕಣ್ತೆರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಕರ ಹಠಕ್ಕೆ ಮಕ್ಕಳಿಗೆ ಅನ್ಯಾಯ

ಬುಡ್ಗ ಜಂಗಮ ಮತ್ತು ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮರುಗೇಶ್​ ಮಾತನಾಡಿ, ಜಾತಿ ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ನೊಂದ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ದಾಖಲಿಸುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಇದರಿಂದ 19 ಮಕ್ಕಳಿದ್ದು, ಈ ವರ್ಷ 6 ಮಕ್ಕಳು ದಾಖಲಾಗಿವೆ. ಶಾಲೆಯಲ್ಲಿ 25 ಮಕ್ಕಳಿರಬೇಕಾಗಿತ್ತು. ಹಾಗೆಯೇ ಅಂಗನವಾಡಿಗೂ 10 ಮಕ್ಕಳು ದಾಖಲಾಗಬೇಕಾಗಿತ್ತು. ಆದರೆ, ತಮ್ಮ ಮಕ್ಕಳಿಗೆ ಜಾತಿ ಪ್ರಮಾಣಪತ್ರ ಸಿಗದ ಕಾರಣ ಪಾಲಕರುಶಾಲೆಗೆ ಕಳುಹಿಸಲ್ಲ. ಶಿಕ್ಷಕರು ಶಾಲೆಗೆ ಬಂದು ವೃಥಾ ವಾಪಸಾಗುತ್ತಿರುವ ದೃಶ್ಯಸಾಮಾನ್ಯವಾಗಿದ್ದು, ಸಮಸ್ಯೆ ಪರಿಹಾರವಾಗುವವರೆಗೂ ಶಾಲೆಗೆ ದಾಖಲಾತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮುದಾಯದ ಯುವ ಮುಖಂಡ ಅಭಿಜಿತ್​ ಗೌಡ ಮಾತನಾಡಿ, ಬಡತನದ ಬೇಗೆಯಲ್ಲಿ ಬೆಂದಿರುವ ಅಲೆಮಾರಿ ಬುಡ್ಗ ಜಂಗಮ ಹಾಗೂ ಚನ್ನದಾಸರ್​ ಸಮುದಾಯದ ಮಕ್ಕಳ ಉನ್ನತ ವ್ಯಾಸಂಗ ಹಾಗೂ ಉಜ್ವಲ ಭವಿಷ್ಯಕ್ಕೆ ಕೂಡಲೇ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಶಾಸಕ ಕೊತ್ತೂರು ಮಂಜುನಾಥ್​ ಅವರು ಬುಡ್ಗ ಜಂಗಮ ಜಾತಿಯಲ್ಲದಿದ್ದರೂ ಪ್ರಮಾಣ ಪತ್ರ ಪಡೆದಿದ್ದರಿಂದ ವಿವಾದ ಕೋರ್ಟ್​ ಮೆಟ್ಟಿಲೇರಿದೆ. ಸದರಿ ಜಾತಿ ಪ್ರಮಾಣ ಪತ್ರ ವಿವಾದವೇ ಈ ಸಮುದಾಯ ಪ್ರಮಾಣ ಪತ್ರ ಪಡೆದುಕೊಳ್ಳಲು ಅಡ್ಡಿಯಾಗಿದೆ.
2012ರಿಂದಲೂ ಪ್ರಮಾಣ ಪತ್ರ ಸಿಗದೇ ಸಮುದಾಯ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಯಾರೋ ಮಾಡಿದ ತಪ್ಪಿಗೆ ಜಿಲ್ಲಾಡಳಿತ ಇಡೀ ಬುಡ್ಗ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡದೇ ರದ್ದುಗೊಳಿಸಿದೆ. ಇದರಿಂದ ನಮಗೂ ಜಾತಿ ಪ್ರಮಾಣಪತ್ರವಿಲ್ಲ, ನಮ್ಮ ಮಕ್ಕಳಿಗೂ ಇಲ್ಲ. ಹೀಗಾಗಿ ಅವರ ಭವಿಷ್ಯದ ದೃಷ್ಟಿಯಿಂದ ಹೋರಾಟ ಅನಿವಾರ್ಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net