ಚಾರಿತ್ರಿಕ ಸತ್ಯ ಮತ್ತು ಕಾಲ್ಪನಿಕ ಮೆರುಗು ಮಿಳಿಗೊಂಡ ಕೃತಿ ಚಿಕವೀರರಾಜೇಂದ್ರ - ಡಾ.ಚನ್ನಪ್ಪ ಕಟ್ಟಿ

 ಡಾ.ಚನ್ನಪ್ಪ ಕಟ್ಟಿ
ಡಾ.ಚನ್ನಪ್ಪ ಕಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • * ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ‘ಚಿಕವೀರರಾಜೇಂದ್ರ’ ಕೃತಿ ಪರಿಚಯ
ಬೆಂಗಳೂರು: ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕವೀರರಾಜೇಂದ್ರ ಚಾರಿತ್ರಿಕ ಸತ್ಯ ಹಾಗೂ ಕಾಲ್ಪನಿಕ ಮೆರಗು ಮಿಳಿತಗೊಂಡ ಕನ್ನಡದ ಶ್ರೇಷ್ಠ ಕೃತಿ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಜಯನಗರದ ರಾಣಿ ಸರಳಾದೇವಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ‘ಚಿಕವೀರರಾಜೇಂದ್ರ ಕೃತಿ’ ಕುರಿತು ಅವರು ಮಾತನಾಡಿದರು.
ಚಾರಿತ್ರಿಕ ಕಾದಂಬರಿ ಸತ್ಯದ ಹಾಗೂ ಚಾರಿತ್ರಿಕ ಆಧಾರಗಳ ಅಂಶಗಳ ಮೇಲೆ ರೂಪುಗೊಂಡಿರುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಈ ವಿಚಾರದ ಬಗ್ಗೆ ಸಾಕಷ್ಟು ಎಚ್ಚರವಹಿಸಿ ತುಂಬಾ ಅಧ್ಯಯನ ನಡೆಸಿ ಈ ಕಾದಂಬರಿ ರಚಿಸಿದ್ದಾರೆ ಎಂದರು.

ದೌರ್ಬಲ್ಯಗಳಿಂದ ಪತನ:

ಒಬ್ಬ ವ್ಯಕ್ತಿ ತಾನು ದುರ್ಬಲನಾಗಿದ್ದು ಅನೇಕ ದೌರ್ಬಲ್ಯಗಳಿಂದ ಕೂಡಿದ್ದಾಗ ತನ್ನನ್ನು ಸೇರಿ ಪರಿಸರ, ಕುಟುಂಬ, ವ್ಯವಸ್ಥೆ ಹಾಗೂ ಒಂದು ರಾಜ್ಯವನ್ನು ಹೇಗೆ ಪತನದತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಈ ಕಾದಂಬರಿ ಉತ್ತಮ ಉದಾರಣೆಯಾಗಿದೆ. ಕೊಡಗಿನ ಹಾಲೇರಿ ವಂಶಸ್ಥ ಚಿಕರಾಜೇಂದ್ರ ಹೇಗೆ ತನ್ನ ಲೊಲುಪತೆಯಿಂದ ರಾಜ್ಯದ ಅವನತಿಗೆ ಕಾರಣವಾಗುತ್ತಾನೆ. ಅವನ ಸುತ್ತ ನಡೆಯುವ ಪಿತೂರಿಗಳು, ಅವನ ಸ್ತ್ರೀ ದೌರ್ಬಲ್ಯ, ಕೋಪಿಷ್ಟ ಬುದ್ಧಿ ಮತ್ತು ದುಡುಕಿನ ನಿರ್ಧಾರಗಳು ಹೇಗೆ ಒಂದು ರಾಜ ಮನೆತನವನ್ನು ಕೊನೆಗಾಣಿಸುತ್ತದೆ ಎಂಬುದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಈ ಕಾದಂಬರಿಯಲ್ಲಿ ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಸಾಹಿತಿ ಡಾ. ಯು. ಆರ್. ಅನಂತಮೂರ್ತಿಯವರಿಂದ ಹಿಡಿದು ಅನೇಕರು ಈ ಕಾದಂಬರಿಯನ್ನು ತುಂಬಾ ಪ್ರಶಂಶಿಸಿದ್ದಾರೆ ಹಾಗೆಯೇ ಸಾಕಷ್ಟು ಟೀಕೆಗಳು ಸಹ ಬಂದಿದೆ. ಟೀಕೆ ಮತ್ತು ಹೊಗಳಿಕೆ ಎರಡು ಇದ್ದಾಗಲೇ ಒಂದು ಕೃತಿಯ ಸಾಹಿತ್ಯಕ ಶ್ರೇಷ್ಠತೆಯ ನೈಜ ಅರಿವಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಬ್ಯಾಂಕ್ ಎಂಪ್ಲಾಯೀಸ್ ಎಜುಕೇಷನ್ ಇನ್ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಕೆ. ಲಕ್ಷ್ಮೀಶ, ಸಂಸ್ಥೆಯ ಅಧ್ಯಕ್ಷ ಬಿ. ಕೋದಂಡ ರಾಮ, ಪ್ರಾಂಶುಪಾಲ ಸುನಿಲ್ ಬಾಬು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ. ಬಿ. ಕಿರಣ್ ಸಿಂಗ್ ಇತರರು ಇದ್ದರು.

ವಿದ್ಯಾರ್ಥಿಗಳು ಪಠ್ಯವನ್ನು ಓದಬೇಕು ಹಾಗೆಯೇ ಸಾಹಿತ್ಯವನ್ನು ತಿಳಿದುಕೊಳ್ಳಬೇಕು. ಪಠ್ಯ ನಿಮ್ಮ ಪರೀಕ್ಷೆಯನ್ನು ಪಾಸು ಮಾಡಲು ಅಗತ್ಯ, ಆದರೆ ಸಾಹಿತ್ಯ ಕೃತಿ ನಿಮ್ಮ ಬದುಕಿನ ಪರೀಕ್ಷೆಯನ್ನು ಎದುರಿಸಲು ನೆರವಾಗುತ್ತದೆ.

— - ಡಾ. ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net