ಚನ್ನಬಸವೇಶ್ವರಸ್ವಾಮಿ ರಥೋತ್ಸವ ಸಂಪನ್ನ

Channabasaveshwaraswamy Chariot Festival is auspicious.
Channabasaveshwaraswamy Chariot Festival is auspicious.
Published on
ಗುಬ್ಬಿ : ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕೈಂಕರ್ಯ ನಡೆದವು. ತೊರೆಮಠ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ, ತೆವಡೇಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಪೂಜಾ ವಿಧಿವಿಧಾನ ನಡೆಸಲಾಯಿತು. ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕರೆತಂದು ರಥೋತ್ಸವ ಪೀಠ ಅಲಂಕರಿಸಿದ ಮೇಲೆ ಮಧ್ಯಾಹ್ನ 1 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆಹಣ್ಣು, ದವನ ತೂರಿ ಭಕ್ತಿ ಸಮರ್ಪಿಸಿತು.
ಬಿಸಿಲಿನ ಝಳಕ್ಕೆ ಬಳಲಿದ ಭಕ್ತರಿಗೆ ಹಲವು ಸಂಘ ಸಂಸ್ಥೆಗಳು ಪಾನಕ, ಮಜ್ಜಿಗೆ, ಕೋಸಂಬರಿ, ಫಲಹಾರ ವಿತರಣೆ ಮಾಡಿದರು. ದೇವಾಲಯದ ದಾಸೋಹ ಸಮಿತಿ ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಬೆಳಗ್ಗೆಯಿಂದ ನಿರಂತರವಾಗಿ ರಾತ್ರಿಯವರೆಗೆ ವ್ಯವಸ್ಥೆ ಮಾಡಲಾಯಿತು. ಪೆಟ್ರೋಲ್ ಬಂಕ್ ಬಸವರಾಜು ಮತ್ತು ಮಕ್ಕಳು ಸಾವಿರಾರು ಭಕ್ತರಿಗೆ ನೀರಿನ ಬಾಟಲ್ ಜತೆಗೆ ಪ್ರಸಾದ ನೀಡಿದರು.
ಕ್ಷೇತ್ರಪಾಲಕ ಶ್ರೀ ಗುಬ್ಬಿಯಪ್ಪ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಹರಕೆ ತೀರಿಸುವ ಹಾಗೂ ಹರಕೆ ಕಟ್ಟಿಕೊಳ್ಳುವ ಪದ್ಧತಿ ನಡೆದುಬಂದಿದೆ. ದಾಸೋಹ ಸಮಿತಿಗೆ ದವಸಧ್ಯಾನ, ತರಕಾರಿ ಇನ್ನಿತರ ಕಾಳು ಬೇಳೆಗಳನ್ನು ಭಕ್ತರು ದಾನವಾಗಿ ನೀಡಿದ ಫಲವಾಗಿ ನಿರಂತರ ದಾಸೋಹ ರಾತ್ರಿವರೆಗೆ ನಡೆಯಿತು. ಹಗಲಿರುಳು ಶ್ರಮಿಸುವ ಸ್ವಯಂ ಸೇವಕರ ತಂಡ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ವ್ಯವಸ್ಥಿತವಾಗಿ ನಿರ್ವಹಿಸಿದರು.
ರಥೋತ್ಸವಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲೆಯ ಸುಭಿಕ್ಷೆಗಾಗಿ ಪ್ರಾರ್ಥಿಸಿ ದವನ ಬಾಳೆಹಣ್ಣು ಎಸೆದು ಕಾಲಕಾಲಕ್ಕೆ ಮಳೆ ಬೆಳೆಗಾಗಿ ಪೂಜೆ ಸಲ್ಲಿಸಿದರು. ಜತೆಯಲ್ಲಿ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ತಹಸೀಲ್ದಾರ್ ಬಿ.ಆರತಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು. ರಥೋತ್ಸವಕ್ಕೆ ಎಲ್ಲ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಹದಿನೆಂಟು ಕೋಮಿನ ಮುಖಂಡರು ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net