ಅಬಕಾರಿ ಉಪಆಯುಕ್ತರ ಲಾಗಿನ್ ಐಡಿ ಬದಲಿಸಿ-Excise

ಅಬಕಾರಿ ಇಲಾಖೆಯ ಉಪಆಯುಕ್ತರು
ಅಬಕಾರಿ ಇಲಾಖೆಯ ಉಪಆಯುಕ್ತರು
Published on
ಬೆಂಗಳೂರು: ಅಬಕಾರಿ ಇಲಾಖೆಯ ಉಪಆಯುಕ್ತರಿಗೆ ನೀಡಲಾಗಿರುವ ಲಾಗಿನ್ ಐಡಿ ಬದಲಿಸಿ ಆಯುಕ್ತರಿಗೆ ಅಥವಾ ಕಂದಾಯ ಡಿಸಿಗೆ ವರ್ಗಾಯಿಸುವಂತೆ ಒತ್ತಾಯ ಕೇಳಿಬಂದಿದೆ.
ಹೋಟೆಲ್ ಮತ್ತು ವಸತಿಗೃಹ (ಸಿಎಲ್-7), ಸನ್ನದು ಸ್ಥಳಾಂತರ ಮಂಜೂರಾತಿ ಮತ್ತು ಕಟ್ಟಡದ ನೀಲನಕ್ಷೆ ಅನುಮೋದನೆಗಾಗಿ ಉಪಆಯುಕ್ತರಿಗೆ ಜವಾಬ್ದಾರಿ ನೀಡಲಾಗಿರುವುದರಿಂದ ಅವರಿಗೆ ಲಾಗಿನ್ ಐಡಿ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅವರು, ಅರ್ಜಿ ವಿಲೇವಾರಿಗೆ ಲಕ್ಷಾಂತರ ರೂ. ಲಂಚ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ.
ಲಂಚ ನೀಡದಿದ್ದರೆ ಕಡತ ವಿಲೇವಾರಿ ಮಾಡುವುದಿಲ್ಲ ಎಂದು ಬೆದರಿಸುತ್ತಾರೆ. ಇದೀಗ, ಬಜೆಟ್‌ನಲ್ಲಿ ಆನ್‌ಲೈನ್ ಸರಳೀಕರಣ ಹೆಸರಿನಲ್ಲಿ ಭ್ರಷ್ಟ್ರಾಚಾರ ವಿಕೇಂದ್ರೀಕರಣ ಇದ್ದಿದ್ದನ್ನು ಕೇಂದ್ರೀಕರಣ ಮಾಡಲಾಗಿರುವುದರಿಂದ ಲಾಗಿನ್ ಐಡಿ ತೆಗೆದರೆ ಭ್ರಷ್ಟಾಚಾರ ನಿಯಂತ್ರಿಸಬಹುದು ಎಂಬ ಸಲಹೆ ವ್ಯಕ್ತವಾಗಿದೆ.
ಕೆಲ ಉಪ ಆಯುಕ್ತರು ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಪ್ರತಿ ಬಾರಿ ವರ್ಗಾವಣೆ ಸಂದರ್ಭದಲ್ಲಿ ಸಚಿವರ ಆಪ್ತರ ಜತೆ ಸಿಂಡಿಕೇಟ್ ಮಾಡಿಕೊಂಡು, ವರ್ಗಾವಣೆಗಾಗಿ ಕೋಟ್ಯಂತರ ರೂ.ವಸೂಲಿ ಮಾಡಿ ಮಾಡಲಾಗುತ್ತಿದೆ. ಹೆಚ್ಚು ಹಣ ನೀಡುವ ಅಧಿಕಾರಿಗಳಿಗೆ ಬೇಡಿಕೆ ಇರುವ ಸ್ಥಳಗಳಿಗೆ ನಿಯುಕ್ತಿ ಮಾಡಲಾಗುತ್ತಿದೆ.
ಒಬ್ಬೊಬ್ಬ ಅಧಿಕಾರಿಗೆ ಎರಡೆರಡು ಹುದ್ದೆ ನೀಡಲಾಗುತ್ತಿದೆ. ಆಯಕಟ್ಟಿನ ಜಾಗಕ್ಕೆ ತೆರಳಲು 3-4 ಕೋಟಿ ರೂ. ಲಂಚ ನೀಡಬೇಕಿದೆ. ಹೆಚ್ಚಿನ ಹಣ ಪಡೆದು ಕಿರಿಯ ಅಧಿಕಾರಿಗಳಿಗೆ ಉಪ ಆಯುಕ್ತರ ಹುದ್ದೆ ನೀಡಲಾಗಿದೆ. ಹಾಗಾಗಿ, ಕೌನ್ಸೆಲಿಂಗ್ ಮೂಲಕ ಅಬಕಾರಿ ಉಪ ಆಯುಕ್ತರನ್ನು ವರ್ಗಾವಣೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net