ಗುಬ್ಬಿ:ಬಹುಕಾಲದ ನಿರೀಕ್ಷೆಯ ಎಂಟು ಜಿಲ್ಲೆಗೆ ಜೀವಜಲವಾದ ಎತ್ತಿನಹೊಳೆ ಯೋಜನೆ ಮುಗಿಯುವ ಹಂತದಲ್ಲಿ ಅಸೂಯೆ ಗುಣವನ್ನು ಪ್ರದರ್ಶಿಸಿದ ಕೇಂದ್ರ ಸರ್ಕಾರ ಇಲ್ಲಸಲ್ಲದ ಕ್ಯಾತೆ ತೆಗೆದು ಯೋಜನೆ ಪೂರ್ಣಗೊಳಿಸಲು ಅಡ್ಡಿಪಡಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕಿಡಿಕಾರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ ಎತ್ತಿನಹೊಳೆ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ 23 ಸಾವಿರ ಕೋಟಿ ರೂ. ವಿನಿಯೋಗಿಸಿ, ಶೇ.90 ರಷ್ಟು ಕೆಲಸ ಪೂರ್ಣವಾಗಿದೆ. ಈ ಸಮಯ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ಅಸೂಯೆಯಲ್ಲಿ ಅರಣ್ಯ, ಪರಿಸರ ಹೆಸರಿನಿಂದ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಈ ಮಟ್ಟದ ಕಾಮಗಾರಿ ಆಗುವವರೆಗೆ ಸುಮ್ಮನಿದ್ದು ಈಗ ನಾಲ್ಕು ತಿಂಗಳಿಂದ ಏಕಾಏಕಿ ಮೂರು ಸಮಿತಿ ರಚಿಸಿ ಪರಿಸರ ಹೆಸರಿನಿಂದ ಅಡ್ಡಗಾಲು ಹಾಕಿದೆ. ಈ ಯೋಜನೆ ಬಗ್ಗೆ ಮನವರಿಕೆ ಮಾಡಲು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ದೆಹಲಿ ಹಾಗೂ ಡೆಹ್ರಾಡೂನ್ ತೆರಳಿ 111 ಹೆಕ್ಟೇರ್ ಅರಣ್ಯ ಪ್ರದೇಶದ ಅರಣ್ಯೀಕರಣ ಬಗ್ಗೆ ಸವಿವರವಾಗಿ ಚರ್ಚಿಸಿದ್ದರೂ ಅನುಮತಿ ನೀಡುತ್ತಿಲ್ಲ. ದುರುದ್ದೇಶ ಎದ್ದು ಕಾಣುವ ಹಿನ್ನಲೆ ರೈತರಿಗೆ ಅವಶ್ಯ ಎತ್ತಿನಹೊಳೆ ಯೋಜನೆ ಉಳಿಸಲು ಜನವರಿ 4 ರಂದು ಕೆ.ಬಿ.ಕ್ರಾಸ್ ಬಳಿ ಜನಧ್ವನಿ ಕಾರ್ಯಕ್ರಮ ಮೂಲಕ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನ ಜನರಿಗೆ ಅರಿವು ಮೂಡಿಸಿ ಕೇಂದ್ರ ಸರ್ಕಾರದ ಜನವಿರೋಧಿತನ ಬಯಲಿಗೆ ಎಳೆಯಲಾಗುವುದು ಎಂದರು.
ಕೆಪಿಸಿಸಿ ಮಾಜಿ ಸದಸ್ಯ ಕೆ.ಆರ್.ತಾತಯ್ಯ ಮಾತನಾಡಿ, ಬೃಹತ್ ಯೋಜನೆಯನ್ನು 2012 ರಲ್ಲಿ ಬಿಸಿ ಚರ್ಚೆ ನಡೆದು ಹಲವು ವಿರೋಧದ ನಡುವೆ ಎತ್ತಿನಹೊಳೆ ಯೋಜನೆ 2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಚಾಲನೆ ಪಡೆದಿತ್ತು. ಭೂ ಸ್ವಾಧಿನ ವಿಚಾರದಲ್ಲಿ ಸಾಕಷ್ಟು ಅಡೆತಡೆ ಎದುರಾದಾಗ ಡಿ.ಕೆ.ಶಿವಕುಮಾರ್ ಅವರು ಖುದ್ದು ನಿಂತು ಎಲ್ಲ ಸಮಸ್ಯೆ ಬಗೆಹರಿಸಿ 10 ವರ್ಷದಲ್ಲಿ ಅಂತಿಮ ರೂಪಕ್ಕೆ ತಂದಿದ್ದಾರೆ. ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಈ ಯೋಜನೆ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಲಭಿಸಲಿದೆ ಎಂಬ ಅಸೂಯೆಯಲ್ಲಿ ತಾಂತ್ರಿಕ ಸಮಸ್ಯೆ ಸೃಷ್ಟಿ ಮಾಡಿ 8 ಜಿಲ್ಲೆಗೆ ಕುಡಿಯುವ ನೀರು ಇಲ್ಲದಂತೆ ಮಾಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡುತ್ತಿದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಗುರು ರೇಣುಕಾರಾಧ್ಯ, ಎ.ನರಸಿಂಹಮೂರ್ತಿ, ವಾಸುಗೌಡ, ಈಶ್ವರಯ್ಯ, ಕಿಟ್ಟದಕುಪ್ಪೆ ನಾಗರಾಜ್, ತಿಮ್ಲಿಪಾಳ್ಯ ಶಶಿ ಇದ್ದರು.