ಲೋಕಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಿಎಸ್‌ಐ ಕೆ.ಬಿ. ಜಕ್ಕನ್ನವರ ಮಾತನಾಡಿದರು. ರಫೀಕ ಬೈರಕದಾರ, ಮಹೇಶ ಹುಗ್ಗಿ, ಗೋವಿಂದ ಕೌಲಗಿ, ಮಾರುತಿ ರಂಗಣ್ಣವರ ಇತರರಿದ್ದರು.
ಲೋಕಾಪುರ: ಮೊಹರಂ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ, ಸಹಕಾರದಿಂದ ಹಬ್ಬ ಯಶಸ್ವಿಗೊಳಿಸಬೇಕು ಎಂದು ಪಿಎಸ್‌ಐ ಕೆ.ಬಿ. ಜಕ್ಕನ್ನವರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಮೊಹರಂ ಹಬ್ಬವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು, ಗಲಾಟೆ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ ಬೈರಕದಾರ ಮಾತನಾಡಿ, ಗಂಧ ಮತ್ತು ಕತ್ತಲ ರಾತ್ರಿ ಕಾರ್ಯಕ್ರಮ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದರು.
ಪಟಾಕಿ ವ್ಯಾಪಾರಸ್ಥ ಆನಂದ ಹವಳಖೋಡ ಮಾತನಾಡಿ, ಎಲ್ಲರೂ ಸೇರಿ ಶಾಂತಿಯಿಂದ ಮೊಹರಂ ಆಚರಿಸೋಣ, ನಮ್ಮಲ್ಲಿರುವ ಕಲೆ ಮತ್ತು ಸಂಸ್ಕೃತಿ ಅನಾವರಣ ಮಾಡುವಂತಹ ಹಬ್ಬಗಳಲ್ಲಿ ಹಿರಿಯರು ಮತ್ತು ಯುವಕರು ಭಾಗಿಯಾಗಿ ಹಬ್ಬ ಆಚರಿಸೋಣ ಎಂದರು.
ಮಹೇಶ ಹುಗ್ಗಿ, ಗೋವಿಂದ ಕೌಲಗಿ, ಸುರೇಶ ಹುಗ್ಗಿ, ಅಂಜುಮನ್-ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಪುರ, ಮಾರುತಿ ರಂಗಣ್ಣವರ, ಗುಲಾಬಸಾಬ ಅತ್ತಾರ, ನಾಗೇಶ ಜಿರಗಾಳ, ಅಬ್ದುಲ್ ಮುಲ್ಲಾ ಸೇರಿ ಪೊಲೀಸ್ ಸಿಬ್ಬಂದಿ ಹಾಗೂ ಹಿಂದೂ-ಮುಸ್ಲಿಂ ಸಮಾಜದ ಪ್ರಮುಖರು ಇದ್ದರು.