ಇಳಕಲ್ಲ: ನಗರದ ತಹಸೀಲ್ದಾರ್ ಕಚೇರಿಯ ಎಜೆಎಸ್‌ಕೆ ಕೊಠಡಿ ಮುಂಭಾಗ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕೊಠಡಿಯ ಎಲೆಕ್ಟ್ರಿಕಲ್ ವೈರ್ ಮತ್ತು ನೋಟಿಸ್ ಬೋರ್ಡಿನ ಕಾಗದ ಪತ್ರಗಳನ್ನು ಸುಟ್ಟು ಹಾಕಿ ಸಿಸಿ ಕ್ಯಾಮರಾ ಧ್ವಂಸ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಸಿಬ್ಬಂದಿ ಬೆಂಕಿಯಿಂದಾದ ಅವಘಡಗಳನ್ನು ನೋಡಿ ತಹಸೀಲ್ದಾರ್ ಅಮರೇಶ ಪಮ್ಮಾರಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಾರ್ಯಾಲಯದಲ್ಲಿನ ಕೊಠಡಿಗಳ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಅಮರೇಶ ಪಮ್ಮಾರ ಮಾತನಾಡಿ, ಬೆಂಕಿ ಅವಘಡ ಶಾರ್ಟ್ ಸರ್ಕ್ಯೂಟ್‌ದಿಂದಾಗಿ ಆಗಿದೆಯೋ ಅಥವಾ ಕಿಡಿಗೇಡಿಗಳು ಉದ್ದೇಶಪೂರ್ವಕ ಕೃತ್ಯ ಮಾಡಿದ್ದಾರೋ ಅದರ ಬಗ್ಗೆ ಪರಿಶೀಲನೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಉದ್ದೇಶಪೂರ್ವಕ ಕೃತ್ಯ ನಡೆಸಿದ್ದರೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕಚೇರಿಯಲ್ಲಿನ ನೋಟಿಸ್ ಬೋರ್ಡ್‌ಗೆ ಹಾಕಿರುವ ಕಾಗದ ಪತ್ರಗಳನ್ನು ಸುಟ್ಟು ಹಾಕಿದ್ದಾರೆ, ಸಿಸಿ ಕ್ಯಾಮರಾವನ್ನು ಸಹ ಧ್ವಂಸ ಮಾಡಿದ್ದಾರೆ, ವೈರ್ ಸುಟ್ಟು ಹೋಗಿವೆ. ಕೊಠಡಿಗಳಲ್ಲಿನ ಯಾವುದೇ ದಾಖಲೆಗಳಿಗೆ ಮತ್ತು ಗಣಕಯಂತ್ರಗಳಿಗೆ ಹಾನಿಯಾಗಿಲ್ಲ ಎಂದು ಅವರು ತಿಳಿಸಿದರು.