ಅಲ್ಲದೆ, ಕಾವೇರಿ 1 ರಿಂದ 5ನೇ ಹಂತದವರೆಗೆ ಮಳವಳ್ಳಿಯ ತೊರೆಕಾಡನಹಳ್ಳಿಯಿಂದ ನೀರು ಪೂರೈಸಲಾಗುತ್ತಿದ್ದು, ಸದರಿ ಕಾರಿಡಾರ್ ಅಡಿಯಲ್ಲಿ ಹೆಚ್ಚುವರಿ ಕೊಳವೆಗಳನ್ನು ಅಳವಡಿಸಲು ಜಾಗದ ಅಭಾವವಿರುತ್ತದೆ. ಹಾಗಾಗಿ, ಕಾವೇರಿ 6ನೇ ಹಂತದ ಯೋಜನೆಯಡಿಯಲ್ಲಿ ಕಟ್ಟೇರಿಯಿಂದ ನೀರು ಪೂರೈಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 6,939 ಕೋಟಿ ರೂಪಾಯಿ ಆಗಿದೆ. ಬೆಂಗಳೂರು ನಗರದ ಪ್ರಸ್ತುತ ನೀರಿನ ಅವಶ್ಯವನ್ನು ಪೂರೈಸಲು ಕೆ.ಆರ್.ಎಸ್ ಅಣೆಕಟ್ಟೆಯಿಂದ ಪ್ರತಿದಿನ ಸುಮಾರು 900 ಕ್ಯೂಸೆಕ್ ನೀರನ್ನು ಪಡೆಯಬೇಕಿರುತ್ತದೆ. ಆದರೆ, ಅಣೆಕಟ್ಟೆಯಿಂದ ಬಿಡುಗಡೆ ಮಾಡಿದ ನೀರು ಬೆಂಗಳೂರು ತಲುಪುವ ಮಾರ್ಗದಲ್ಲಿ ಉಂಟಾಗುವ ನಷ್ಟ ಹಾಗೂ ಇತರೆ ಕಾರಣಗಳಿಂದಾಗಿ ಶಿವ ಅಣೆಕಟ್ಟಿನ ರೀಚ್‌ಗೆ ಅಗತ್ಯ ಪ್ರಮಾಣದ ನೀರು ತಲುಪಿಸಲು ಕೆ.ಆರ್.ಎಸ್. ಜಲಾಶಯದಿಂದ ಸುಮಾರು 1800 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕಿರುತ್ತದೆ. ಕಾವೇರಿ 6ನೇ ಹಂತದ ಯೋಜನೆಯಲ್ಲಿ ಪ್ರತಿನಿತ್ಯ ಜಲಾಶಯದಿಂದ 200 ಕ್ಯೂಸೆಕ್ ನೀರನ್ನು ಸರಬರಾಜು ಮಾಡಲು ಸುಮಾರು 400 ಕ್ಯೂಸೆಕ್ ನೀರಿನ ಅವಶ್ಯ ಇದೆ ಎಂದು ಮಾಹಿತಿ ನೀಡಿದರು.