'ಜನ ನಾಯಗನ್​' ಪೋಸ್ಟರ್​ ಹರಿದು ಚಿಂದಿ! 'ಕಾವೇರಿ'ದ ಕಿಚ್ಚಿನ ಬೆನ್ನಲ್ಲೇ ಸಿಎಂ ವಿಜಯ್​ ಚಿತ್ರದ ಶೋಗಳು ರದ್ದು​

'ಜನ ನಾಯಗನ್​' ಪೋಸ್ಟರ್​ ಹರಿದು ಚಿಂದಿ!
'ಜನ ನಾಯಗನ್​' ಪೋಸ್ಟರ್​ ಹರಿದು ಚಿಂದಿ!
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿಗೆ 15 ದಿನಗಳು 3500 ಕ್ಯೂಸೆಕ್​ ಕಾವೇರಿ ನೀರು ಹರಿಸಲು CWRC ಆದೇಶ
  • ಸಿಎಂ ವಿಜಯ್ ನಟನೆಯ ಜನ ನಾಯಗನ್​ ಚಿತ್ರದ ಪೋಸ್ಟರ್​ ಹರಿದ ಹೋರಾಟಗಾರರು
  • ವಿಜಯ್ ಸಿನಿಮಾದ ಪ್ರದರ್ಶನಗಳನ್ನು ರದ್ದುಗೊಳಿಸಿದ ಥಿಯೇಟರ್​ ಮಾಲೀಕರು
ಬೆಂಗಳೂರು: ತಮಿಳುನಾಡಿಗೆ 15 ದಿನಗಳು 3500 ಕ್ಯೂಸೆಕ್​ ಕಾವೇರಿ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶ ಬೆನ್ನಲ್ಲೇ ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ಮಂಡಳಿಯ ನಿರ್ಧಾರವನ್ನು ಖಂಡಿಸಿ ರೈತರು, ಕನ್ನಡ ಪರ ಸಂಘಟನೆಗಳು ಹೋರಾಟಕ್ಕಿಳಿದಿದ್ದು, ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ತಮಿಳುನಾಡಿನ ಸಿಎಂ ವಿಜಯ್ ಅವರ 'ಜನ ನಾಯಗನ್'​ ಚಿತ್ರದ ಪೋಸ್ಟರ್​ಗಳನ್ನು ಹರಿದು ಆಕ್ರೋಶ ಹೊರಹಾಕಿದ್ದಾರೆ.
ಯಾವುದೇ ಕಾರಣಕ್ಕೂ ನೀರು ಬಿಡಬೇಡಿ ಎಂದು ರೈತರು ಪಟ್ಟು ಹಿಡಿದಿದ್ದು, ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಕರ್ನಾಟಕಕ್ಕೆ ಆಗಮಿಸಬೇಕಿದ್ದ ತಮಿಳುನಾಡು ಸಿಎಂ ವಿಜಯ್​ ಭೇಟಿ ರದ್ದಾಗಿದೆ. ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ಸರಿಯಿಲ್ಲದ ಹಿನ್ನೆಲೆ ನಾಡಿಗೆ ವಿಜಯ್ ಬರುವುದು ಬೇಡವೆಂದು ಡಿಕೆಶಿ ಹೇಳಿದ್ದಾರೆ. ಇದೇ ಸಮಯದಲ್ಲಿ, ಆಕ್ರೋಶಭರಿತ ಹೋರಾಟಗಾರರು ಚಿತ್ರಮಂದಿರಗಳಲ್ಲಿ ಹಾಕಿರುವ ಜನ ನಾಯಗನ್​ ಪೋಸ್ಟರ್​ ಹರಿದು ಚಿಂದಿ ಮಾಡಿದ್ದಾರೆ.
ಅನೇಕ ಚಿತ್ರಮಂದಿರಗಳು ಸ್ವತಃ ವಿಜಯ್ ಚಿತ್ರದ ಪೋಸ್ಟರ್‌ಗಳನ್ನು ಅದಾಗಲೇ ತೆಗೆದುಹಾಕಿವೆ ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ಸಿನಿಮಾದ ಪ್ರದರ್ಶನವನ್ನು ರದ್ದು ಮಾಡಿವೆ. ರೈತರು ಮತ್ತು ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯ ನಡುವೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳು 'ಜನ ನಾಯಗನ್' ಪ್ರದರ್ಶನಗಳಿಗೆ ಸಂಪೂರ್ಣ ಬ್ರೇಕ್​ ಹಾಕಿವೆ. ಜು.23ರಂದು ತೆರೆಕಂಡ 'ಜನ ನಾಯಗನ್​' ರಾಜ್ಯಾದ್ಯಂತ 75ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ಸುಮಾರು 50 ಮಲ್ಟಿಪ್ಲೆಕ್ಸ್ ಸೇರಿ ಒಟ್ಟು 25ರಿಂದ 150 ಸ್ಕ್ರೀನ್​ಗಳಲ್ಲಿ ತೆರೆಕಂಡಿತು. ಉತ್ತಮ ಪ್ರದರ್ಶನವನ್ನೇ ಕಾಣುತ್ತಿದ್ದ ಚಿತ್ರಕ್ಕೆ ಈಗ ಕಾವೇರಿಯ ಕಾವು ತಟ್ಟಿದೆ.
ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪೊಲೀಸರ ಸೂಚನೆ ಮೇರೆಗೆ ‘ಜನ ನಾಯಗನ್​’ ಪ್ರದರ್ಶನವನ್ನು ರದ್ದು ಮಾಡಲಾಯಿತು. ಥಿಯೇಟರ್ ಸಿಬ್ಬಂದಿ ಚಿತ್ರದ ಪೋಸ್ಟರ್‌ಗಳು ಮತ್ತು ಕಟೌಟ್‌ಗಳನ್ನು ತೆಗೆದುಹಾಕಿದರು. ಮತ್ತು ಮುಂದಿನ ಪ್ರದರ್ಶನಗಳಿಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಕನ್ನಡ ಸಿನಿಮಾ 'ಕರಾವಳಿ'ಗೆ ಅವಕಾಶ ನೀಡಲಾಗಿದೆ. ರಾಜ್ಯವ್ಯಾಪಿ ಕಾವೇರಿ ಹೋರಾಟ ಜೋರಾಗಿರುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಆ.13 ಕರ್ನಾಟಕ ಬಂದ್​ಗೆ ಕರೆ

ಇಂದು ವಿವಿಧ ಸಂಘಟನೆಗಳ ಜತೆ ಸಭೆ ನಡೆಸಿದ ಕನ್ನಡ ಪರ ಹೋರಾಟಗಾರರ ವಾಟಾಳ್ ನಾಗರಾಜ್​, ಆ.13ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಿದರು. ಇದಕ್ಕೆ ಹಲವು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಗುಡುಗಿದರು.
13ರ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್​ ನಡೆಯಲಿದೆ. ನಮ್ಮ ಹೋರಾಟಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ಆಟೋ ಚಾಲಕರು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಗಳು ಬಂದ್​ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಮುಖ್ಯವಾಗಿ, ಬಂದ್​ನ ಸಮಯದಲ್ಲಿ ತುರ್ತು ಸೇವೆಗಳಿಗೆ ತೊಂದರೆ ಮಾಡುವುದಿಲ್ಲ ಎಂದು ವಾಟಾಳ್ ನಾಗರಾಜ್​ ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net