ಗ್ರಾಪಂ ಅಧ್ಯಕ್ಷ, ಪಿಡಿಒ ಸೇರಿ ಮೂವರ ವಿರುದ್ಧ ಕೇಸ್​

ಬೀರನಹಳ್ಳಿ ಗ್ರಾಮದಲ್ಲಿ 9 ಗುಂಟೆ ಜಮೀನು ಅಕ್ರಮ ವರ್ಗಾವಣೆ ಪ್ರಕರಣ
ಬೀರನಹಳ್ಳಿ ಗ್ರಾಮದಲ್ಲಿ 9 ಗುಂಟೆ ಜಮೀನು ಅಕ್ರಮ ವರ್ಗಾವಣೆ ಪ್ರಕರಣ
Published on
ಸೇಡಂ: ಕುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದಲ್ಲಿ ಮಾಲೀಕನ ಗಮನಕ್ಕೆ ತರದೆ 9 ಗುಂಟೆ ಜಮೀನನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ, ಅಭಿವೃದ್ಧಿ ಅಧಿಕಾರಿ ಭಾಗಪ್ಪ ಬಿರಾದಾರ ಹಾಗೂ ಜಮೀನು ಹಕ್ಕು ಬದಲಾಯಿಸಿಕೊಂಡ ಶಾಹಿದ್​ ವಿರುದ್ಧ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಮಿರಾಜ್​ ಪಟೇಲ್​ ಅವರು ಸೇಡಂನ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಪಿಸಿಆರ್​ ಅರ್ಜಿ ಸಲ್ಲಿಸಿ 1987ರಿಂದ ಬೀರನಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂ 160/5ನ 10ಗುಂಟೆ ಜಮೀನಿನ ಮಾಲೀಕ, ಕಬ್ಜೆದಾರನಾಗಿರುತ್ತೇನೆ. ಇದರ ಸಂಪೂರ್ಣ ದಾಖಲೆಗಳನ್ನು ನಾನು ಹೊಂದಿದ್ದೇನೆ. ಜತೆಗೆ 1 ಗುಂಟೆ ಸ್ಥಳದಲ್ಲಿ ನಾನು ಮತ್ತು ನನ್ನ ಸಹೋದರರು ಸೇರಿಕೊಂಡು ಮಸೀದಿ ನಿಮಾರ್ಣ ಮಾಡಿ, ನಿರ್ವಹಣೆ ಮಾಡುತಿದ್ದೇವೆ. ಉಳಿದ 9ಗುಂಟೆ ಜಮೀನು ವಸತಿ ಉದ್ದೇಶಕ್ಕಾಗಿ 15ಲಕ್ಷ ರೂ. ಖರ್ಚು ಮಾಡಿ ಅಭಿವೃದ್ಧಿಗೊಳಿಸಿದ್ದೇವೆ. ಆದರೆ ಕುಕ್ಕುಂದಾ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ಇದ್ದು, 2023ರಲ್ಲಿ ಪಿಡಿಒ ಭಾಗಪ್ಪ ಬಿರಾದಾರ, ಅಧ್ಯಕ್ಷ ಶಿವಕುಮಾರ ಅವರು ಸೇರಿ ಯಾವುದೇ ನೋಟಿಸ್​ ನೀಡದೆ ಅಕ್ರಮವಾಗಿ ಶಾಹಿದ್​ ಎನ್ನುವವರ ಹೆಸರಿಗೆ 9ಗುಂಟೆ ಸ್ಥಳದ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ. ಫಾಮ್​ರ್ 11ಬಿ ನೀಡಿದ್ದಾರೆ. ಇದಲ್ಲದೆ 2023ರ ಮೇ 8ರಂದು ನಡಾವಳಿ ಮಂಡಿಸಿ ಪರೋಕ್ಷವಾಗಿ ಆರೋಪಿತನಿಗೆ ಸಹಕಾರ ನೀಡಿದ್ದಾರೆ ಎಂದು ದೂರಿದ್ದರು.
ಅನೇಕ ಬಾರಿ ದಾಖಲೆ ಮಾಡಿಕೊಂಡ ವ್ಯಕ್ತಿಗೆ ನೀನು ಖರೀದಿಸಿದ ಪತ್ರ ನೀಡುವಂತೆ ವಿನಂತಿಸಿಕೊಂಡರೂ ಯಾವುದೇ ಸ್ಪಂದನೆ ಮಾಡಿಲ್ಲ. ಗ್ರಾಪಂ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಯ ಸಹಕಾರದಿಂದಲೇ ಅಕ್ರಮ ನಡೆದಿದ್ದು, ಇದಕ್ಕಾಗಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಹೀಗಾಗಿ ಸಂಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸುವಂತೆ ಕೋರಿದ್ದರು.
ಸಮಗ್ರ ವಿಚಾರಣೆ ನಡೆಸಿದ ಕೋರ್ಟ್​ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದು, ಮಳಖೇಡ ಠಾಣೆಯಲ್ಲಿ ಜು.20ರಂದು ಪ್ರಕರಣ ದಾಖಲಾಗಿದೆ.
"

ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ. ನನ್ನ ಆಸ್ತಿ ನನಗೆ ಗೊತ್ತಿಲ್ಲದೆ ಫಾಮ್​ರ್ 11ಬಿ ಮಾಡಿದ ಅಧ್ಯಕ್ಷ, ಪಿಡಿಒ ಹಾಗೂ ಹಕ್ಕು ಬದಲಾಯಿಸಿಕೊಂಡ ಆರೋಪಿತನ ಬಂಧನ ಆಗಬೇಕು. ಜತೆಗೆ ಪಿಡಿಒ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಇಂತಹ ತಪ್ಪುಗಳು ನಿಲ್ಲುವುದಿಲ್ಲ. ನ್ಯಾಯಾಲಯದಲ್ಲಿ ಇನ್ನು ಪ್ರಕರಣ ಚಾಲ್ತಿಯಲ್ಲಿದ್ದು, ಆಸ್ತಿ ನನಗೆ ಹಕ್ಕು ವರ್ಗಾವಣೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. > ಮಿರಾಜ್​ ಪಟೇಲ್​, ದೂರುದಾರ

— > ಮಿರಾಜ್​ ಪಟೇಲ್​, ದೂರುದಾರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net