K-SET ಫೈಲ್ ಆಗಿದ್ದ ಅಭ್ಯರ್ಥಿ ಹೈಕೋರ್ಟ್​ ತೀರ್ಪಿನಿಂದ ಪಾಸ್!​

ಹೈಕೋರ್ಟ್​
ಹೈಕೋರ್ಟ್​
Published on
ಬೆಂಗಳೂರು: ಕೆ-ಸೆಟ್​ ಪರೀಕ್ಷಾ ಫಲಿತಾಂಶ ಘೋಷಣೆಯ ಕಾರ್ಯವಿಧಾನ ಮತ್ತು ಮಾನದಂಡಗಳನ್ನು ಮರುಪರಿಶೀಲಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.
2021ರ ಕೆ-ಸೆಟ್​ ಪರೀಕ್ಷೆಯ ಕಾನೂನು ವಿಷಯದಲ್ಲಿ ಅನುತ್ತೀರ್ಣ ಎಂದು ಘೋಷಿಸಲ್ಪಟ್ಟಿದ್ದ ತಮ್ನನ್ನು ಉತ್ತೀರ್ಣ ಎಂದು ಪರಿಗಣಿಸಿ ಪ್ರಮಾಣ ಪತ್ರ ನೀಡುವಂತೆ ಕೋರಿ ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ. ಗೋಪಾಲ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಆರ್​. ದೇವದಾಸ್​ ಅವರ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
2021ರ ಕೆ&ಸೆಟ್​ ಪರೀಕ್ಷೆಯ ಉತ್ತೀರ್ಣಕ್ಕೆ ಮಾನದಂಡವಾಗಿ ಹೊರಡಿಸಿದ ಕಟ್​-ಆಫ್ ಅಂಕಗಳ ಅಧಿಸೂಚನೆಯು 1990ರ ಕರ್ನಾಟಕ ಅನುಸೂಚಿತ ಜಾತಿಗಳು, ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ಮೀಸಲಾತಿ ಮತ್ತು ನೇಮಕ) ಅಧಿನಿಯಮವನ್ನು ಉಲ್ಲಂಘಿಸುತ್ತದೆ. ಈ ಕಾಯ್ದೆಯು ರಾಜ್ಯ ಸರ್ಕಾರದ ನಾಗರಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ.15 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.3 ಮೀಸಲಾತಿ ನಿಗದಿಪಡಿಸಿದೆ. ಆದರೆ, 2021ರ ಕೆ-ಸೆಟ್ ಪರೀಕ್ಷೆಯ​ ಕಟ್​-ಆಫ್​ ಅಂಕಗಳ ಅಧಿಸೂಚನೆಯು ಈ ಮೀಸಲು ಪ್ರಮಾಣಗಳನ್ನು ಪಾಲಿಸಿಲ್ಲ. ಕಟ್​-ಆಫ್​ ನಿರ್ಧರಿಸುವಾಗ ವಿಷಯವಾರು ಮೀಸಲಾತಿಯನ್ನು ಪರಿಗಣಿಸಿಲ್ಲ. ಇದರಿಂದಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತನ್ನನ್ನು ಅರ್ಹತೆಯಿದ್ದರೂ ಅನುತ್ತೀರ್ಣವೆಂದು ಘೋಷಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಅರ್ಜಿದಾರರ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ನಾಲ್ಕು ವಾರಗಳ ಒಳಗೆ ಕೆ-ಸೆಟ್ ಉತ್ತೀರ್ಣ ಪ್ರಮಾಣ ಪತ್ರವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ವಾದ ಆಲಿಸಿದ ನ್ಯಾಯಪೀಠ, ಪರೀಕ್ಷಾ ಪ್ರಾಧಿಕಾರಗಳು ಫಲಿತಾಂಶ ಪ್ರಕಟಿಸುವಾಗ 1990ರ ಕಾಯ್ದೆ ಅನುಸಾರ ಮೀಸಲಾತಿ ರೋಸ್ಟರ್​ ಅನ್ನು ವಿಷಯವಾರು ಅನ್ವಯಿಸಬೇಕು. ಕೆ-ಸೆಟ್​ ಫಲಿತಾಂಶ ಘೋಷಣೆಗೆ ಅನುಸರಿಸಿರುವ ಯುಜಿಸಿ ನಿರ್ಧರಿಸಿದ ಕಾರ್ಯವಿಧಾನ ಮತ್ತು ಮಾನದಂಡಗಳು 1990 ಕಾಯ್ದೆಯನ್ನು ಮೊದಲ ಎರಡು ಹಂತಗಳಲ್ಲಿ ಮಾತ್ರ ಅನುಸರಿಸುತ್ತದೆ. ಮೂರನೇ ಹಂತದಲ್ಲಿ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net