ಸುರಕ್ಷಿತ ಉತ್ಪನ್ನ ಖರೀದಿ ಪ್ರತಿಯೊಬ್ಬರ ಹಕ್ಕು

ವಿಜಯಪುರ ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಹಕರ ವಿಶ್ವ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಉದ್ಘಾಟಿಸಿದರು. ಅರವಿಂದ ಹಾಗರಗಿ, ಕಮಲ ಕಿಶೋರ ಜೋಶಿ, ವಿದ್ಯಾ ಗಲಗಲಿ ಇತರರಿದ್ದಾರೆ.
ವಿಜಯಪುರ ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಹಕರ ವಿಶ್ವ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಉದ್ಘಾಟಿಸಿದರು. ಅರವಿಂದ ಹಾಗರಗಿ, ಕಮಲ ಕಿಶೋರ ಜೋಶಿ, ವಿದ್ಯಾ ಗಲಗಲಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿಕೆ
  • ಜಿ.ಪಂ. ಸಭಾಂಗಣದಲ್ಲಿ ಗ್ರಾಹಕರ ವಿಶ್ವ ದಿನ ಆಚರಣೆ
ವಿಜಯಪುರ: ಭಾರತದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಜಾರಿಗೆ ತಂದಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಮಹತ್ವದ ಕಾಯ್ದೆಯಾಗಿದ್ದು, ಗ್ರಾಹಕರಿಗೆ ನ್ಯಾಯಸಮ್ಮತ ಸೇವೆ ಮತ್ತು ಸುರಕ್ಷಿತ ಉತ್ಪನ್ನಗಳನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಗ್ರಾಹಕರ ವಿಶ್ವ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ, ಕೆಎಫ್ ಸಿಎಸ್ಸಿ ನಿಗಮ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಗ್ರಾಹಕರಿಗೆ ಮುಖ್ಯವಾಗಿ ಸುರಕ್ಷತಾ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಮಾಡುವ ಹಕ್ಕು, ಕೇಳಿಸಿಕೊಳ್ಳುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಹಕ್ಕು ಪ್ರಮುಖವಾಗಿವೆ. ಅವುಗಳ ಮೂಲಕ ಗ್ರಾಹಕರು ಮೋಸ, ಕಳಪೆ ಗುಣಮಟ್ಟದ ವಸ್ತುಗಳು ಹಾಗೂ ಸೇವೆಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡಲು ಅವಕಾಶ ದೊರಕುತ್ತದೆ ಎಂದು ಮಾಹಿತಿ ನೀಡಿದರು.
ಸದ್ಯದ ದಿನಗಳಲ್ಲಿ ಆನ್‌ಲೈನ್ ವ್ಯಾಪಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪಾರದರ್ಶಕ ಮಾಹಿತಿ ನೀಡುವುದು ಕಡ್ಡಾಯ. ಸರ್ಕಾರವು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಗ್ರಾಹಕರು ಜಾಗೃತಿ ಹೊಂದುವ ಮೂಲಕ ಯಾವುದೇ ಅನ್ಯಾಯ ಎದುರಾದಲ್ಲಿ ತಕ್ಷಣ ದೂರು ಸಲ್ಲಿಸುವುದು ಹಾಗೂ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಮಾತನಾಡಿ, ನಾವು ಖರೀದಿಸಿದ ವಸ್ತುವಿನಲ್ಲಿ ಮೋಸವಾಗಿದೆ ಎಂದು ತಿಳಿದಾಗ ನಾವು ಪರಿಹಾರಕ್ಕಾಗಿ ಈ ವೇದಿಕೆಗೆ ಬಂದು ದೂರನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ಈ ಕಾಯಿದೆ ಕುರಿತು ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಪರಿಹಾರ ಒದಗಿಸುವಲ್ಲಿ ಬಹಳ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆ ಸದಸ್ಯ ಕಮಲ ಕಿಶೋರ ಜೋಶಿ ಮಾತನಾಡಿ, ಮಾರುಕಟ್ಟೆಯಲ್ಲಿ ನಾವು ಖರೀದಿಸುವ ಪ್ರತಿಯೊಂದು ವಸ್ತುವಿನ ಕುರಿತು ನಿಖರವಾದ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ವಸ್ತುವಿನ ಮೇಲೆ ಕನಿಷ್ಟ ದರ, ಮುಕ್ತಾಯದ ದಿನಾಂಕ ಹಾಗೂ ಉತ್ಪಾದನೆ ಕುರಿತು ನಮೂದಿಸಲಾಗಿರುತ್ತದೆ. ಒಂದು ವೇಳೆ ಇದು ಯಾವುದೂ ಇಲ್ಲದಿದ್ದಲ್ಲಿ ಗ್ರಾಹಕರಾದ ನಾವು ಅಂಗಡಿ ಮಾಲೀಕರನ್ನು ಪ್ರಶ್ನಿಸಿ ಅವರಿಂದ ಸಮರ್ಪಕ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ನ್ಯಾಯವಾದಿಗಳ ಸಹಾಯ ಪಡೆಯದೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಈ ವೇದಿಕೆಗೆ ಬಂದು ದೂರನ್ನು ನೀಡಬಹುದಾಗಿದೆ ಎಂದರು.
ಹಿರಿಯ ನ್ಯಾಯವಾದಿ ಎಂ.ಜಿ. ಮಠಪತಿ ಉಪನ್ಯಾಸ ನೀಡಿದರು. ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆ ಅಧ್ಯಕ್ಷೆ ವಿದ್ಯಾ ಗಲಗಲಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಉಪ ಕಾಯದರ್ಶಿ ಪ್ರಕಾಶ ವಡ್ಡರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ ಪಾಟೀಲ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎಸ್.ಎಂ. ಕರೆಕಲ್ಲ, ಕೆಎಸ್‌ಎಫ್‌ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ.ಆರ್. ನಾಯ್ಕೋಡಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net