ಬಾಗಲವಾಡದಲ್ಲಿ ಬಿಸಿಲಲ್ಲೇ ನಿಂತು ಸುಸ್ತಾಗುತ್ತಿರುವ ಪ್ರಯಾಣಿಕರು
ಕವಿತಾಳ: ಬಾಗಲವಾಡದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆಂದು ಹಳೇ ಕಟ್ಟಡ ತೆರವುಗೊಳಿಸಿ ಎರಡು ವರ್ಷ ಕಳೆಯುತ್ತಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಇದರಿಂದ ಜನರು ರಸ್ತೆ ಬದಿ ಬಿಸಿಲು, ಮಳೆ, ಚಳಿಯಲ್ಲಿಯೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಬಾಗಲವಾಡ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ಇದೆ. ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿದೆ. ಹಳ್ಳಿಗರು ಮಾನ್ವಿ, ಕವಿತಾಳ, ರಾಯಚೂರು, ಸಿಂಧನೂರು, ಬೆಂಗಳೂರು ಸೇರಿದಂತೆ ಇತರೆಡೆ ಪ್ರಯಾಣಿಸಬೇಕೆಂದರೆ ಬಾಗಲವಾಡ ಬಸ್ ನಿಲ್ದಾಣದಿಂದ ಹೋಗಬೇಕು.
ಈ ಮೊದಲು ಇದ್ದ ಬಸ್ ನಿಲ್ದಾಣದಲ್ಲಿ ಹೈಟೆಕ್ ಶೌಚಗೃಹವ ಕಟ್ಟಿಸಲಾಗಿದೆ. ಆದರೆ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಎರಡು ವರ್ಷಗಳ ಹಿಂದೆ ಹಳೆ ಕಟ್ಟಡ ತೆರವುಗೊಳಿಸಲಾಗಿದ್ದು, ಅಲ್ಲೀಗ ಮಣ್ಣು, ಕಲ್ಲು ಮಾತ್ರ ಹಾಕಲಾಗಿದೆ. ಅನುದಾನ ಕೊರತೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಟ್ಟಡ ಕಾಮಗಾರಿ ಆರಂಭಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಬಸ್ ನಿಲ್ದಾಣದ ಕಟ್ಟಡ ನಿರ್ಮಾಣಕ್ಕೆ ಎದುರಾಗಿರುವ ವಿಘ್ನಗಳನ್ನು ನಿವಾರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಒತ್ತುವರಿ ಆಗದಿರಲಿ: ಬಾಗಲವಾಡ ನೀರಾವರಿ ಪ್ರದೇಶವಾಗಿದೆ. 20ಕ್ಕೂ ಹೆಚ್ಚು ಗ್ರಾಮ, ಕ್ಯಾಂಪ್‌ಗಳಿಗೆ ಕೇಂದ್ರ ಸ್ಥಾನವಾಗಿದೆ. ಹೆಚ್ಚಿನ ಶಿಕ್ಷಣಕ್ಕೆ ಮಾನ್ವಿ, ಸಿಂಧನೂರಿಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ ನಿಲ್ದಾಣದಿಂದ ಹೋಗಬೇಕು. ಬಸ್ ನಿಲ್ದಾಣವಿಲ್ಲದೆ ರಸ್ತೆ ಬದಿ ಬಸ್ ಬರುವವರೆಗೆ ನಿಂತುಕೊಳ್ಳುವಂತಾಗಿದೆ. ಬಸ್ ನಿಲ್ದಾಣದ ಜಾಗ ಒತ್ತುವರಿ ಆಗುವ ಮೊದಲೇ ಕಟ್ಟಡ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕಾರಣವೇನು?: ಪೋತ್ನಾಳ ಗ್ರಾಮಕ್ಕೆ ಈ ಹಿಂದೆ ಬಸ್ ನಿಲ್ದಾಣ ಕಾಮಗಾರಿಗೆ 60 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಅದನ್ನು ಪೋತ್ನಾಳ ಗ್ರಾಮಸ್ಥರು ತಿರಸ್ಕರಿಸಿದ್ದರು ಎನ್ನಲಾಗಿದೆ. ಅದೇ ಅನುದಾನದಿಂದ ಬಾಗಲವಾಡದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಸಿದ್ಧಪಡಿಸಿದ್ದ ಅಧಿಕಾರಿಗಳು, ಬಾಗಲವಾಡದ ಹಳೇ ಬಸ್ ನಿಲ್ದಾಣ ಕಟ್ಟಡ ತೆರವು ಮಾಡಿದ್ದರು. ಅಡಿಪಾಯ ತೆಗೆಯುವಾಗ ಪೋತ್ನಾಳ ಗ್ರಾಮಸ್ಥರು ತಮಗೆ ಮಂಜೂರಾದ ಬಸ್ ನಿಲ್ದಾಣವನ್ನು ಕಟ್ಟಿಸಿಕೊಳ್ಳುತ್ತೇವೆ ಎಂದು ತಕರಾರು ತೆಗೆದರು ಎನ್ನಲಾಗಿದೆ. ಇದೇ ಕಾರಣದಿಂದ ಬಾಗಲವಾಡ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬೀಳಲು ಕಾರಣ ಎಂದೂ ಹೇಳಲಾಗುತ್ತಿದೆ.
ಬಾಗಲವಾಡದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದರಿಂದ ಬಸ್ ಬರುವವರೆಗೆ ನಾವು ರಸ್ತೆಯಲ್ಲೇ ನಿಲ್ಲುವಂತಾಗಿದೆ. ನೆರಳಿನ ವ್ಯವಸ್ಥೆಯೂ ಇಲ್ಲದ ಕಾರಣ ರಸ್ತೆಯಲ್ಲಿ ನಿಂತು ನಿಂತು ತುಂಬ ಸುಸ್ತು ಆಗುತ್ತಿದೆ.
— ಚನ್ನಬಸಮ್ಮ ಬಾಗಲವಾಡ ಗ್ರಾಮಸ್ಥೆ
ಬಾಗಲವಾಡದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಾಮಗಾರಿ ನಿಲ್ಲಿಸಲಾಗಿದೆ ಎನ್ನುವುದು ಸುಳ್ಳು. ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು.