ಮಹಾದಾನಿ ರಾಜಾ ಲಖಮಗೌಡರ ಕೊಡುಗೆ ಅಪಾರ

ರಾಜಾ ಲಖಮಗೌಡ
ರಾಜಾ ಲಖಮಗೌಡ
Published on
ಬೆಳಗಾವಿ: ಸಮಾಜಸೇವೆ, ಶಿಕ್ಷಣ, ಧಾರ್ಮಿಕ ಸಹಿಷ್ಣುತೆ ಮತ್ತು ದಾನಧರ್ಮದ ಇತಿಹಾಸದಲ್ಲಿ ರಾಜಾ ಲಖಮಗೌಡರ ಹೆಸರು ಚಿರಸ್ಥಾಯಿಯಾಗಿದೆ. ‘ಸಾವಿರಕ್ಕೊಬ್ಬ ದೊರೆ’ ಖ್ಯಾತಿ ಪಡೆದ ಅವರು ಅಪಾರ ಸಂಪತ್ತನ್ನು ವೈಯಕ್ತಿಕ ವೈಭೋಗಕ್ಕೆ ಬಳಸದೆ ಸಮಾಜದ ಶ್ರೇಯೋಭಿವೃದ್ಧಿಗೆ ಮುಡಿಪಾಗಿಟ್ಟ ಅಪರೂಪದ ಮಹಾದಾನಿ. ವೀರಶೈವ ಸಮುದಾಯದ ಪ್ರಪ್ರಥಮ ಬಾರ್-ಅಟ್-ಲಾ ಪದವೀಧರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು, ಶಿಕ್ಷಣ, ಕೃಷಿ, ಆರೋಗ್ಯ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ.
ಹುಕ್ಕೇರಿ ತಾಲೂಕಿನ ಅಮ್ಮಣಗಿಯಲ್ಲಿ 1864ರ ಜುಲೈ 29ರಂದು ಅಲಗೌಡ ಹಾಗೂ ಕೃಷ್ಣಾಬಾಯಿ ದಂಪತಿಗೆ ಜನಿಸಿದ ಅವರು, ವಂಟಮೂರಿ ಸಂಸ್ಥಾನದ ಅಧಿಪತಿಯಾಗಿ ರಾಜಾ ಲಖಮಗೌಡರು ಎಂಬ ಹೆಸರಿನಿಂದ ಪ್ರಸಿದ್ಧರಾದರು. ಪ್ರಾಥಮಿಕ ಶಿಕ್ಷಣದ ಬಳಿಕ ಇಂಗ್ಲೆಂಡಿಗೆ ತೆರಳಿ 1888ರಲ್ಲಿ ಬಾರ್-ಅಟ್-ಲಾ ಪದವಿ ಪಡೆದು, ಬ್ರಿಟಿಷ ಸರ್ಕಾರದಿಂದ ಪ್ರಥಮ ದರ್ಜೆ ನ್ಯಾಯಾಧೀಶರಾಗಿ ನೇಮಕಗೊಂಡರು.
ಶಿಕ್ಷಣವೇ ಸಮಾಜದ ಪ್ರಗತಿಯ ಮೂಲವೆಂದು ನಂಬಿದ್ದ ಅವರು, ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಉದಾರ ದೇಣಿಗೆ ನೀಡಿ ಭದ್ರ ಅಡಿಪಾಯ ಹಾಕಿದರು. ವಿಜ್ಞಾನ ಮಹಾವಿದ್ಯಾಲಯ, ಶಾಲೆಗಳು, ಆಯುರ್ವೇದ ಆಸ್ಪತ್ರೆಗಳು, ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದರು. ಧಾರವಾಡದ ಕರ್ನಾಟಕ ಕಾಲೇಜ್, ಕರ್ನಾಟಕ ಲಾ ಸೊಸೈಟಿ, ಕನ್ನಡ ಸಾಹಿತ್ಯ ಪರಿಷತ್, ಶಿವಯೋಗ ಮಂದಿರ, ವಿಲ್ಲಿಂಗ್ಡನ್ ಕಾಲೇಜ್, ಲೇಡಿ ಐರ್ವಿನ್ ಕಾಲೇಜು, ವನಿತಾ ವಿದ್ಯಾಲಯ ಸೇರಿ ಹಲವಾರು ಸಂಸ್ಥೆಗಳು ಅವರ ದಾನಶೀಲತೆಗೆ ಸಾಕ್ಷಿಗಳಾಗಿವೆ.
ಧರ್ಮ, ಜಾತಿ ಮತ್ತು ಭಾಷೆ ಭೇದವಿಲ್ಲದೆ ದೇವಾಲಯ, ಮಠ, ಆಸ್ಪತ್ರೆ, ಗ್ರಂಥಾಲಯ, ಕೆರೆ-ಕಾಲುವೆಗಳು ಹಾಗೂ ರೈತರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸಮಾಜಮುಖಿ ಚಿಂತನೆಯ ಪ್ರತೀಕವಾಗಿದೆ. ಹಿಡಕಲ್ಲ ಜಲಾಶಯ ನಿರ್ಮಾಣದ ಮೂಲಕ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ ಅವರು ಪರಿಸರ ಪ್ರೇಮಿ, ಸಾಹಿತ್ಯಾಭಿಮಾನಿ ಹಾಗೂ ಸಂಗೀತಾಸಕ್ತರೂ ಆಗಿದ್ದರು. 1908ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸಮುದಾಯದ ಸಂಘಟನೆಗೆ ಹೊಸ ದಿಕ್ಕು ನೀಡಿದರು. ಬ್ರಿಟಿಷ ಸರ್ಕಾರ ಅವರ ಸೇವೆ ಗುರುತಿಸಿ ರಾಜಾ ಹಾಗೂ ಸರದಾರ ಎಂಬ ಬಿರುದು ನೀಡಿ ಗೌರವಿಸಿತು.
ಪರೋಪಕಾರಂ ಇದಂ ಶರೀರಂ ಎಂಬ ಜೀವನ ಮೌಲ್ಯವನ್ನು ಅಕ್ಷರಶಃ ಪಾಲಿಸಿದ ರಾಜಾ ಲಖಮಗೌಡರ ಉದಾತ್ತ ವ್ಯಕ್ತಿತ್ವ, ಅಪಾರ ದಾನಶೀಲತೆ ಮತ್ತು ಸಮಾಜಮುಖಿ ಕಾರ್ಯ ಇಂದಿಗೂ ಸ್ಫೂರ್ತಿದಾಯಕವಾಗಿ ಉಳಿದಿವೆ.
- ಪ್ರೊ.ಶಶಿಕಾಂತ ತಾರದಾಳೆ ಕನ್ನಡ ಅಧ್ಯಾಪಕ, ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ, ಬೆಳಗಾವಿ
***
ಇಂದು ಜಯಂತ್ಯುತ್ಸವ
ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಸರ್ ಸಿ.ವಿ.ರಾಮನ್ ಸಭಾಂಗಣದಲ್ಲಿ ಜು.29ರಂದು ಬೆಳಗ್ಗೆ 10.30ಕ್ಕೆ ಮಹಾದಾನಿ ರಾಜಾ ಲಖಮಗೌಡರ 163ನೇ ಜಯಂತಿ ಉತ್ಸವ ಆಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net