ಎಪಿಎಂಸಿ ಭೂಮಿಯನ್ನು ಇತರ ಇಲಾಖೆಗಳಿಗೆ ಮಂಜೂರು ಮಾಡದೆ ಟೊಮ್ಯಾಟೊ ಮಾರುಕಟ್ಟೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ತಾಲೂಕು ವರ್ತಕರ ಸಂದ ಮುಖಂಡರು, ಸದಸ್ಯರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರ ಸಂ, ಹಮಾಲಿ ಸಂ ಹಾಗೂ ರೈತ ಸಂದ ನೇತೃತ್ವದಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ಮೀಸಲಿಟ್ಟಿರುವ ಸರ್ವೇ ನಂ 402 ರ ಸರ್ಕಾರಿ ಭೂಮಿಯನ್ನುಇತರ ಇಲಾಖೆಗಳಿಗೆ ಮಂಜೂರು ಮಾಡುವ ಮಾತುಗಳು ಕೇಳಿಬಂದಿದ್ದು, ಯಾವುದೇ ಕಾರಣಕ್ಕೂ ಬೇರೆ ಇಲಾಖೆಗಳಿಗೆ ಮಂಜೂರು ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕು ವರ್ತಕರ ಸಂದ ಅಧ್ಯಕ್ಷ ಎಚ್.ಎಸ್.ನರೇಂದ್ರಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮೀಸಲಿಟ್ಟಿರುವ 50 ಎಕರೆ ಪ್ರದೇಶದಲ್ಲಿ ಇತರ ಇಲಾಖೆಗಳಿಗೆ ಭೂಮಿ ಮಂಜೂರು ಮಾಡಿದರೆ ತಹಸೀಲ್ದಾರ್ ಕಚೇರಿ ಅವರಣದಲ್ಲಿ ತರಕಾರಿ ಮಾರಾಟ ಮಾಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರಪ್ರದೇಶ, ಗುಡಿಬಂಡೆ, ಸೇರಿದಂತೆ ಹತ್ತಾರು ತಾಲೂಕುಗಳಿಂದ ರೈತರು ಬರುತ್ತಿದ್ದು, ತರಕಾರಿ ವ್ಯಾಪಾರ ವಹಿವಾಟಿನಲ್ಲಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ. ಈ ಭಾಗದ ರೈತರು ಟೊಮ್ಯಾಟೊ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅತಿ ಹೆಚ್ಚು ವಹಿವಾಟು ನಡೆಯುತ್ತಿದೆ. ಹಾಗಾಗಿ ಖಾಸಗಿ ಪ್ರದೇಶದಲ್ಲಿ ಬಾಡಿಗೆ ಪಾವತಿಸಿ ಟೊಮ್ಯಾಟೊ ಮಂಡಿಗಳನ್ನು ಅತಿ ಕಷ್ಟದಿಂದ ನಿರ್ವಹಿಸಲಾಗುತ್ತಿದೆ. ಇದರಿಂದ ರೈತರು, ಹಮಾಲಿಗಳು, ವ್ಯಾಪಾರಸ್ಥರಿಗೆ, ವಾಹನ ನಿಲುಗಡೆಗೆ ಅನಾನುಕೂಲ ಆಗುತ್ತಿದೆ ಎಂದರು.
ತಾಲೂಕಿನ ಕಸಬಾ ಹೋಬಳಿಯ ಸರ್ವೇ ನಂ 406ರಲ್ಲಿರುವ 50 ಎಕರೆ ಹಾಗೂ ಕೊಂಡಿರೆಡ್ಡಿಪಲ್ಲಿ ಗ್ರಾಮದ ಸರ್ವೇ ನಂ 46 ರಲ್ಲಿರುವ ಸರ್ಕಾರಿ ಭೂಮಿಯಲ್ಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನೊಳಗೊಂಡಂತೆ ಟೊಮ್ಯಾಟೊಮಾರುಕಟ್ಟೆ ನಿರ್ಮಿಸಿಕೊಡುವಂತೆ 2024 ಮತ್ತು 2025 ನೇ ಸಾಲಿನಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಅಂದಿನ ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದು, ಸದರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಟೊಮ್ಯಾಟೊ ಮಾರುಕಟ್ಟೆಗೆ ಜಮೀನು ಮಂಜೂರು ಮಾಡಿಕೊಡುವುದಾಗಿ ಶಾಸಕರು ಹಾಗೂ ಅಧಿಕಾರಿಗಳು ಮಂಡಿ ಮಾಲೀಕರಿಗೆ, ರೈತರಿಗೆ ಭರವಸೆ ನೀಡಿ ಇದೀಗ ಅದೇ ಸರ್ವೇ ನಂಬರಿನಲ್ಲಿರುವ ಜಮೀನನ್ನು ಇತರ ಇಲಾಖೆಗೆ ಮಂಜೂರು ಮಾಡಲು ಮುಂದಾಗಿರುವ ಜಿಲ್ಲಾ ಮತ್ತು ತಾಲೂಕು ಆಡಳಿತದ ನಡೆಯಿಂದ ಈ ಭಾಗದ ರೈತರು, ಮಂಡಿ ವ್ಯಾಪಾರಸ್ಥರಿಗೆ ತೊಂದರೆ ಎದುರಾಗಲಿದೆ ಎಂದರು.
ಚಿಂತಾಮಣಿ ಮತ್ತು ಕೋಲಾರ ತಾಲೂಕುಗಳಲ್ಲಿ 300 ಎಕರೆ ವಿಸ್ತೀರ್ಣದಲ್ಲಿ ಟೊಮ್ಯಾಟೊ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಮುಂದಾಗಿದೆ, ಆದರೆ, ಬಾಗೇಪಲ್ಲಿಯಲ್ಲಿ ಮಾರುಕಟ್ಟೆಗೆ ಮೀಸಲಿಟ್ಟಿರುವ ಜಮೀನನ್ನು ಇತರ ಇಲಾಖೆಗೆ ನೀಡಲು ಮುಂದಾಗಿರುವ ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ 50 ಎಕರೆ ವಿಸ್ತೀರ್ಣದಲ್ಲಿ ಟೊಮ್ಯಾಟೊ ಮಾರುಕಟ್ಟೆ ನಿರ್ಮಿಸಿಕೊಡದಿದ್ದರೆ ತಾಲೂಕು ಕಚೇರಿಯನ್ನೇ ಟೊಮ್ಯಾಟೊ ಮಾರುಕಟ್ಟೆಯನ್ನಾಗಿ ಪರಿವರ್ತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ತಹಸೀಲ್ದಾರ್ ಮನೀಷಾಪತ್ರಿ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಮನೀಷಾಪತ್ರಿ ಮಾತನಾಡಿ, ಬಾಗೇಪಲ್ಲಿ ಮತ್ತು ಕೊಂಡಿರೆಡ್ಡಿಪಲ್ಲಿ ಗ್ರಾಮದ ಸರ್ವೇ ನಂಬರ್ಗಳಲ್ಲಿರುವ 50 ಎಕರೆ ವಿಸ್ತೀರ್ಣದಲ್ಲಿ ಟೊಮ್ಯಾಟೊಮಾರುಕಟ್ಟೆ ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದರಿ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಒತ್ತುವರಿ ತೆರವುಗೊಳಿಸಬೇಕಾಗಿದೆ. ನೂತನವಾಗಿ ನಿರ್ಮಿಸುತ್ತಿರುವ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ 8 ರಿಂದ 6 ಎಕರೆ ಜಮೀನು ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಟೊಮ್ಯಾಟೊ ಮಾರುಕಟ್ಟೆ, ಒತ್ತುವರಿ ತೆರವು, ಕೋರ್ಟ್ ನಿರ್ಮಾಣಕ್ಕೆ ಜಮೀನು ಸೇರಿದಂತೆ ಎಲ್ಲರೀತಿಯ ಮನವಿ ಸಲ್ಲಿಸಿದ್ದು, ಪರಿಶೀಲಿಸಿ ನ್ಯಾಯ ಓದಗಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಸಂದ ನಾರಾಯಣಸ್ವಾಮಿ, ಹಮಾಲಿ ಸಂದ ಅಧ್ಯಕ್ಷ ತಿಪ್ಪಣ್ಣ, ಮಾರುಕಟ್ಟೆ ವ್ಯಾಪರಸ್ಥರಾದ ಟಿಎಂಎಸ್ ಶ್ರೀನಿವಾಸ್, ವಿ.ನಾರಾಯಣಸ್ವಾಮಿ, ಕೆ.ಎನ್.ಎಸ್ ಕೃಷ್ಣಪ್ಪ, ವೆಂಕಟೇಶಬಾಬು, ಶ್ರೀನಿವಾಸ, ನರೇಶ, ಎ.ಶಂಕರ, ಚಂದ್ರಪ್ಪ, ಮಂಜುನಾಥ, ಹರೀಶ್, ಆಧಿ, ಮಾಕಿರೆಡ್ಡಿ, ಎಚ್.ವಿ.ಎಸ್ ಹರೀಶ್ ಮತ್ತಿತರರು ಇದ್ದರು.