ವಿಜಯಪುರ: ಜಗತ್ತಿಗೆ ಕರುಣೆಯ ಸಂದೇಶ ಸಾರಿದ ಭಗವಾನ್ ಬುದ್ಧನ ತತ್ವ ಮತ್ತು ಸಂದೇಶಗಳು ಸಾರ್ವಕಾಲಿಕವಾಗಿವೆ. ನಾವೆಲ್ಲರೂ ಮಹನೀಯರ ಸಾರಿದ ತತ್ವಗಳನ್ನು ಅರ್ಥೈಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗೋಣ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯಲ್ಲಿ ಇಲ್ಲಿನ ಬುದ್ಧ ವಿಹಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗೌತಮ ಬುದ್ಧರು ಸಾರಿದ ಬೋಧನೆಗಳು ಸಾರ್ವಕಾಲಿಕ ಸತ್ಯವಾಗಿವೆ. ಬುದ್ಧ ಧರ್ಮವು ಮಾನವನ ಅನುಭವದ ಆಳವಾದ ತಿಳಿವಳಿಕೆ ಹೊಂದಿದ್ದು, ಮನುಷ್ಯನ ಮುಕ್ತಿ ಮಾರ್ಗಕ್ಕೆ ಪ್ರಾಯೋಗಿಕ ಮಾರ್ಗ ಕಲ್ಪಿಸುತ್ತದೆ. ತಮ್ಮ ತತ್ವ ಸಿದ್ಧಾಂತಗಳಿಂದಾಗಿ ಕರುಣಾಳು ಎಂದು ಹೆಸರುವಾಸಿಯಾಗಿರುವ ಭಗವಾನ್ ಬುದ್ಧರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಗವಾನ್ ಬುದ್ಧ ಜಯಂತಿಯನ್ನು ಸಾರ್ಥಕಗೊಳಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಸದಸ್ಯ ಸುನೀಲ ಉಕ್ಕಲಿ ಮಾತನಾಡಿ, ಅಹಿಂಸೆ ಹಾಗೂ ಕರುಣೆಯ ಸಂದೇಶ ಸಾರಿದ ಗೌತಮ ಬುದ್ಧನ ಉನ್ನತ ತತ್ವ ಸಿದ್ಧಾಂತಗಳಿಂದಾಗಿ ಬೌದ್ಧ ಧರ್ಮ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾರಿಪುತ್ರ ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿದರು. ತಾಳಿಕೋಟೆಯ ಎಸ್‌ಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಜಾತಾ ಚಲವಾದಿ ಬುದ್ಧ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಕಾ ಬಂಥೇಜಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡರಾದ ಅಭಿಷೇಕ ಚಕ್ರವರ್ತಿ, ಅನೀಲ ಹೊಸಮನಿ, ನಾಗರಾಜ್ ಲಂಬು, ಅಡಿವೆಪ್ಪ ಸಾಲಗಲ್, ಶ್ರೀನಾಥ ಪೂಜಾರಿ, ಮೋಹನ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಪ್ರಭುಗೌಡ ಬಿರಾದಾರ ಮತ್ತಿತರರಿದ್ದರು.
ಅದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಜಿ.ಪಂ. ಮುಖ್ಯ ದ್ವಾರದ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಸಾರಿಪುತ್ರ ಬುದ್ಧ ವಿಹಾರದವರೆಗೆ ಮಹನೀಯರ ಭಾವಚಿತ್ರ ಮೆರವಣಿಗೆ ನಡೆಯಿತು.