ತಾಯಿ ಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ

ಸರಗೂರು ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಶರತ್ ಮಾತನಾಡಿದರು.
ಸರಗೂರು ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಶರತ್ ಮಾತನಾಡಿದರು.
Published on

ಸರಗೂರು:

ತಾಯಿ ಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ ಎಂದು ಸಾಗರೆ ವೈದ್ಯಾಧಿಕಾರಿ ಡಾ.ಶರತ್ ತಿಳಿಸಿದರು. ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯಂದಿರು ಹಾಗೂ ಗರ್ಭಿಣಿಯರಿಗೆ ತಾಯಿ ಹಾಲಿನ ಮಹತ್ವ ಮತ್ತು ಸ್ತನ್ಯಪಾನದ ಕುರಿತು ಸಮಗ್ರ ಮಾಹಿತಿ ನೀಡಿದರು. ನವಜಾತ ಶಿಶುವಿಗೆ ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಹಾಲುಣಿಸುವುದು ಅತ್ಯಂತ ಅಗತ್ಯ ಎಂದರು.
ಮೊದಲಿಗೆ ಬರುವ ಹಳದಿ ಬಣ್ಣದ ಹಾಲು (ಕೊಲೊಸಟ್ರೆಮ್) ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೂಲ್ಯ ಆಹಾರವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎಂದು ತಿಳಿಸಿದರು.
ಹುಟ್ಟಿದ ಮೊದಲ ಆರು ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಹಾಲನ್ನೇ ನೀಡಬೇಕು. ನೀರು, ಜೇನುತುಪ್ಪ ಅಥವಾ ಇತರೆ ಆಹಾರಗಳನ್ನು ನೀಡಬಾರದು. ಆರು ತಿಂಗಳ ನಂತರ ಪೂರಕ ಆಹಾರ ಆರಂಭಿಸಿದರೂ, ಮಗುವಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ತಾಯಿ ಹಾಲುಣಿಸುವುದು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಗರ್ಭಿಣಿಯರು ಆರೋಗ್ಯ ಇಲಾಖೆಯು ನೀಡುವ ಉಚಿತ ಆರೋಗ್ಯ ತಪಾಸಣೆ, ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳು, ಲಸಿಕೆ, ಪೌಷ್ಟಿಕಾಂಶದ ಕುರಿತು ಸಲಹೆ, ಸುರಕ್ಷಿತ ಹೆರಿಗೆ ಸೇವೆ ಹಾಗೂ ಜನನಿ-ಶಿಶು ಆರೈಕೆ ಸೇರಿದಂತೆ ವಿವಿಧ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಮಹತ್ವವನ್ನು ತಿಳಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ತಾಯಿ ಹಾಲಿನ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬ ಸಂದೇಶವನ್ನು ಎಲ್ಲರಿಗೂ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಎಂ.ಸೋಮಶೇಖರ್, ಪ್ರಯೋಗಶಾಲಾ ತಂತ್ರಜ್ಞ ಎಸ್.ಆರ್.ಕೃಷ್ಣ, ನಸಿರ್ಂಗ್ ಅಧಿಕಾರಿ ಜಿ.ರತ್ನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಎಚ್.ಜೆ. ಪುಷ್ಪಲತಾ ಹಾಗೂ ಬಿ.ಮಾಚಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಕೆ.ಆಶಾ, ಎಂ.ಮನು, ಎಚ್.ಪಿ. ಬಿಂದು, ಪೃಥ್ವಿನ್, ನೇತ್ರಾವತಿ, ಆಶಾ ಕಾರ್ಯಕರ್ತೆಯರು, ಆಂಬುಲೆನ್ಸ್ ಚಾಲಕ ವೆಂಕಟೇಶ್, ಗ್ರೂಪ್-ಡಿ ಸಿಬ್ಬಂದಿ ಶೃತಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net