ಟಿ.ಬೇಗೂರು ಕಾಲೇಜಿಗೆ ಬಾಂಬ್​ ಬೆದರಿಕೆ / NELAMANGAL

ಬಾಂಬ್​ ಹಾಕುವುದಾಗಿ ಬಂದಿರುವ ಮೇಲ್​ ಸಂದೇಶ.
ಬಾಂಬ್​ ಹಾಕುವುದಾಗಿ ಬಂದಿರುವ ಮೇಲ್​ ಸಂದೇಶ.
Published on
ನೆಲಮಂಗಲ : ತರಗತಿಯಲ್ಲೇ ಮೆಡಿಕಲ್​ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ್ದ ಪ್ರಾಧ್ಯಾಪಕನಿಗೆ ವಿದ್ಯಾರ್ಥಿಗಳು ಥಳಿಸಿದ್ದರಿಂದ ಅಪರಿಚಿತರು ಪ್ರತಿಷ್ಠಿತ ಕಾಲೇಜಿನ ಇ&ಮೇಲ್​ಗೆ ಬಾಂಬ್​ ಬೆದರಿಕೆ ಸಂದೇಶ ಕಳುಹಿಸಿದ್ದು, ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಟಿ.ಬೇಗೂರಿನ ಖಾಸಗಿ ಮೆಡಿಕಲ್​ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿನಿಗೆ ಪ್ರೀತಿ ನಿವೇದನೆ ಮಾಡಿದ್ದಾನೆ ಎಂದು ಉಪನ್ಯಾಸಕ ಡಾ.ಅಬ್ದುಲ್​ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರು. ಗುರುವಾರ ವಿಡಿಯೋ ವೈರಲ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಧ್ಯಾಪಕನಿಗೆ ನೋಟಿಸ್​ ನೀಡಿ ವಿಚಾರಣೆ ನಡೆಸಿದ್ದರು. ಆದರೆ, ಶುಕ್ರವಾರ ರಾತ್ರಿ 2.45ಕ್ಕೆ ಕಾಲೇಜಿನ ಇ&ಮೇಲ್​ಗೆ ಅಪರಿಚಿತರು ಕಾಲೇಜಿನ ಮೇಲೆ ಬಾಂಬ್​ ಹಾಕುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ವೈದ್ಯರು ಆತಂಕದಿಂದ ಹೊರಗೆ ಬಂದರು.
ಪೊಲೀಸರ ತಂಡ ಹಾಗೂ ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ಆಗಮಿಸಿ ಕಾಲೇಜು ಸುತ್ತಮುತ್ತಲು ಹಾಗೂ ವಿವಿಧ ಭಾಗಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ಬಾಂಬ್​ ಕಂಡುಬಂದಿಲ್ಲ. ಹುಸಿ ಬಾಂಬ್​ ಸಂದೇಶ ಎಂದು ಡಿವೈಎಸ್​ಪಿ ಜಗದೀಶ್​ ತಿಳಿಸಿದ್ದು, ಈ ವಿಚಾರವಾಗಿ ಡಾ.ಅಬ್ದುಲ್​ ವಿಚಾರಣೆ ಇಲ್ಲ. ಆದರೆ, ನೋಟಿಸ್​ಗೆ ಉತ್ತರ ನೀಡಲು ಠಾಣೆಗೆ ಆಗಮಿಸುತ್ತಾರೆ ಎಂದು ಮಾಹಿತಿ ನೀಡಿದರು.
ಮೇಲ್​ನಲ್ಲಿ ಏನಿದೆ ? : ಸಹೋದರ ಅಬ್ದುಲ್​ನನ್ನು ಅವಮಾನಿಸಿರುವುದು ಟಿಇಕೆ -ಕಾಶ್ಮೀರ ಘಟಕಗಳ ಗಮನಕ್ಕೆ ಬಂದಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಖಾಸಗಿ ಕಾಲೇಜೊಂದರ ಕ್ಯಾಂಪಸ್​ನಲ್ಲಿ 15 ಸೈನೈಡ್​ ಅನಿಲ ತುಂಬಿದ ಐಇಡಿಗಳನ್ನು ಮಿನಿ ಡ್ರೋನ್​ ಮೂಲಕ ಇಟ್ಟಿದ್ದು, ನಮಗೆ ಆಸ್ತಿ ಹಾನಿ ಮಾಡುವುದು ಮಾತ್ರ ಬೇಕಾಗಿರುವ ಕಾರಣ ವಿದ್ಯಾರ್ಥಿಗಳನ್ನು ಕ್ಯಾಂಪಸ್​ನಿಂದ ಸ್ಥಳಾಂತರಿಸಿ ಎಂಬ ಸಂದೇಶ ಇ&ಮೇಲ್​ ಮೂಲಕ ಸಂಸ್ಥೆಯ ಅಧಿಕೃತ ಮೇಲ್​ಗೆ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net