ಶಿಕಾರಿಪುರದಲ್ಲಿ 1 ವರ್ಷದ ಹಿಂದೆ ಪಿಜಿಯಲ್ಲಿ ಕಾಣೆಯಾಗಿದ್ದ ಅಪ್ರಾಪ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ: ಮಾಲಕಿ ಸೇರಿ ನಾಲ್ವರ ಬಂಧನ!

Shikaripura > ಶಿಕಾರಿಪುರದಲ್ಲಿ 1 ವರ್ಷದ ಹಿಂದೆ ಪಿಜಿಯಲ್ಲಿ ಕಾಣೆಯಾಗಿದ್ದ ಅಪ್ರಾಪ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ: ಮಾಲಕಿ ಸೇರಿ ನಾಲ್ವರ ಬಂಧನ!
Shikaripura > ಶಿಕಾರಿಪುರದಲ್ಲಿ 1 ವರ್ಷದ ಹಿಂದೆ ಪಿಜಿಯಲ್ಲಿ ಕಾಣೆಯಾಗಿದ್ದ ಅಪ್ರಾಪ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ: ಮಾಲಕಿ ಸೇರಿ ನಾಲ್ವರ ಬಂಧನ!
Published on
ಶಿವಮೊಗ್ಗ: ಶಿಕಾರಿಪುರದ ಪಿಜಿಯಿಂದ ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತೆ ಸಂಗೀತಾ (16) ಮೃತಪಟ್ಟಿರುವುದು ದೃಢಪಟ್ಟಿದೆ. ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಸಿದ್ಧಾಪುರ ವ್ಯಾಪ್ತಿಯ ಮಾವಿನಗುಂಡಿ ಅರಣ್ಯ ಪ್ರದೇಶದಲ್ಲಿ ಎಸೆದಿರುವುದು ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಪಿಜಿ ಮಾಲಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರದ ಪಿಜಿ ಮಾಲಕಿ ಸೌಭಾಗ್ಯ, ಶಿಕಾರಿಪುರ ತಾಲೂಕಿನ ಇಟ್ಟಿಗೆಹಳ್ಳಿಯ ಗಂಗಾನಾಯ್ಕ, ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದ ಪೀರ್ಯಾನಾಯ್ಕ ಮತ್ತು ರಂಜಿತಾ ಬಂಧಿತರು. ಶಿಕಾರಿಪುರ ತಾಲೂಕಿನ ತರ್ಲಘಟ್ಟ ಗ್ರಾಮದ ಸಂಗೀತಾ 2025 ರ ಜೂನ್ 18 ರಂದು ನಾಪತ್ತೆಯಾಗಿದ್ದಳು. ಆಕೆಯ ತಂದೆ 2026 ರ ಜುಲೈ 3 ರಂದು ನೀಡಿದ ದೂರಿನ ಮೇರೆಗೆ ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ನಾಪತ್ತೆ ಪ್ರಕರಣವೆಂದು ದಾಖಲಾಗಿದ್ದ ಕೇಸ್‌ನ ತನಿಖೆಯಲ್ಲಿ ಬಾಲಕಿ ಪಿಜಿಯಲ್ಲೇ ಮೃತಪಟ್ಟಿದ್ದಳು. ಬಳಿಕ ಪೊಲೀಸರು ಅಥವಾ ಅಪ್ರಾಪ್ತೆ ಪಾಲಕರಿಗೆ ಮಾಹಿತಿ ನೀಡದೇ ಪ್ರಕರಣ ಮುಚ್ಚಿಹಾಕಲು ಆರೋಪಿಗಳು ಯತ್ನಿಸಿದ್ದರು.
ಎಂಟನೇ ತರಗತಿ ನಂತರ ಸಂಗೀತಾ ವಿದ್ಯಾಭ್ಯಾಸ ನಿಲ್ಲಿಸಿದ್ದಳು. ತಾಯಿ ಕುಟುಂಬ ತೊರೆದಿದ್ದು, ತಂದೆ ಮದ್ಯಪಾನದ ಚಟದಿಂದ ಆಕೆಯ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಹಾಗಾಗಿ ಉದ್ಯೋಗ ಹುಡುಕಿಕೊಂಡು ಬಂದಿದ್ದ ಆಕೆಗೆ ಪಿಜಿ ಮಾಲಕಿ ಸೌಭಾಗ್ಯ ಆಶ್ರಯ ನೀಡಿದ್ದರು. 2025 ರ ಜೂನ್ 18 ರಂದು ಅದೇ ಪಿಜಿಯಲ್ಲಿ ಸಂಗೀತಾ ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಪಿಜಿ ಮಾಲಕಿ ಸೌಭಾಗ್ಯ ಸೇರಿ ನಾಲ್ವರು ಆರೋಪಿಗಳು ಪೊಲೀಸರಿಗೆ ದೂರು ನೀಡದೇ ಅಪ್ರಾಪ್ತೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಸಾಗಿಸಿದ್ದರು. ಬಳಿಕ ಈ ವಿಷಯವನ್ನು ಯಾರಿಗೂ ತಿಳಿಸದೆ ಒಂದು ವರ್ಷಕ್ಕೂ ಹೆಚ್ಚು ಕಾಲ ಗೌಪ್ಯವಾಗಿಟ್ಟುಕೊಂಡಿದ್ದರು ಎನ್ನಲಾಗಿದೆ.

ತಾಂತ್ರಿಕ ಸಾಕ್ಷ್ಯದಿಂದ ಬಯಲಾಯ್ತು ಸತ್ಯ

ಸಂಗೀತಾ ಒಂದು ವರ್ಷದವರೆಗೆ ಮೊಬೈಲ್ ಬಳಸದೇ ಇದ್ದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೊನೆಯದಾಗಿ ರಂಜಿತಾ ಜೊತೆ ಮಾತನಾಡಿದ್ದ ಮಾಹಿತಿ ಪೊಲೀಸರಿಗೆ ತಾಂತ್ರಿಕ ತನಿಖೆಯಲ್ಲಿ ಲಭ್ಯವಾಗಿತ್ತು. ಆ ಸುಳಿವಿನ ಆಧಾರದಲ್ಲಿ ರಂಜಿತಾಳ ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಅಲ್ಲದೆ, ರಂಜಿತಾ ಮತ್ತು ಪೀರ್ಯಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಾಹಿತಿಗಳು ಹೊರಬಂದಿದ್ದವು. ಅದನ್ನೇ ಪ್ರಮುಖ ಸುಳಿವಾಗಿ ಪಡೆದು ತನಿಖೆ ಮುಂದುವರಿಸಿದಾಗ ಮೃತದೇಹ ಸಾಗಿಸಿದ ಸಂಗತಿ ಬೆಳಕಿಗೆ ಬಂದಿದೆ.

ವೈಜ್ಞಾನಿಕ ಸಾಕ್ಷ್ಯಾಧಾರಗಳ ಪರಿಶೀಲನೆ ಮುಂದುವರಿಕೆ

ಸಂಗೀತಾ ಸಾವಿನ ಪ್ರಕರಣ ಅತ್ಯಂತ ಸಂಕೀರ್ಣ ತನಿಖೆಯಾಗಿದ್ದು, ಇನ್ನೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಪರಿಶೀಲನೆ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದರು. ಇತ್ತೀಚೆಗೆ ಪೊಲೀಸರು ಸ್ಥಳ ಮಹಜರು ನಡೆಸಿ ಅಸ್ಥಿಪಂಜರ ಹಾಗೂ ತಲೆಬುರುಡೆ ಸೇರಿ ಲಭ್ಯವಾದ ಅವಶೇಷ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ಬಿ.ನಿಖಿಲ್ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಜಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆದಿರುವ ಬಗ್ಗೆ ಇದುವರೆಗೂ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಮೃತದೇಹದ ಅವಶೇಷಗಳ ವೈಜ್ಞಾನಿಕ ಪರೀಕ್ಷೆ, ಸಾಕ್ಷಿದಾರರ ವಿಚಾರಣೆ ಹಾಗೂ ಇತರೆ ಸಾಕ್ಷ್ಯ ಸಂಗ್ರಹ ಕಾರ್ಯ ಇನ್ನೂ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳು ದೊರೆತರೆ ಹೆಚ್ಚುವರಿ ಆರೋಪಗಳನ್ನು ಸೇರಿಸಲಾಗುವುದು. ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಸಂಪೂರ್ಣವಾಗಿ ಹೊರಬಂದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net